ದೀಪಾವಳಿ ಹಬ್ಬಕ್ಕೆ ತುಂಬಾ ಪಟಾಕಿ ಹೊಡೆಯಿರಿ: ಜನತೆಗೆ ಅಣ್ಣಾಮಲೈ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶ ದೀಪಾವಳಿ ಹಬ್ಬಕ್ಕೆ ಸಿದ್ಧತೆ ನಡೆಸುತ್ತಿದ್ದು, ಜೊತೆಗೆ ‘ಪಟಾಕಿ ನಿಷೇಧ’ದ ಅಭಿಯಾನ ಕೂಡ ನಡೆಯುತ್ತಿದೆ. ಇದರ ನಡುವೆಯೇ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸಾಕಷ್ಟು ಪಟಾಕಿ ಹೊಡೆಯುವಂತೆ ಕರೆ ನೀಡಿದ್ದಾರೆ.

ದೀಪಾವಳಿ ಹಬ್ಬಕ್ಕಾಗಿ ಕಾರ್ಯಕರ್ತರು ಮತ್ತು ಜನತೆಯನ್ನು ಉದ್ದೇಶಿಸಿ ಆಡಿಯೋ ಸಂದೇಶ ನೀಡಿರುವ ಕೆ. ಅಣ್ಣಾಮಲೈ, ಪಟಾಕಿ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ದೀಪಾವಳಿಯಂದು ಸಾಕಷ್ಟು ಪ್ರಮಾಣದಲ್ಲಿ ಪಟಾಕಿಗಳನ್ನು ಖರೀದಿಸಿ, ಸಿಡಿಸುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಿರುವ ಅವರು, ಪಟಾಕಿಗಳನ್ನು ಸಿಡಿಸುವ ಅಗತ್ಯವನ್ನು ವಿವರಿಸಿದ್ದು, ‘ವಾತಾವರಣಕ್ಕೆ ಇಂಗಾಲ ಹೊರಸೂಸುವಿಕೆಯಲ್ಲಿ ಭಾರತ 125ನೇ ಸ್ಥಾನದಲ್ಲಿದೆ, ಯುಎಸ್ 16 ಮತ್ತು ಚೀನಾ 25ನೇ ಸ್ಥಾನದಲ್ಲಿವೆ. ಆದರೆ ನಾವು ಕೇವಲ ಒಂದು ದಿನ ಪಟಾಕಿ ಸಿಡಿಸುವುದನ್ನು ಪ್ರಮುಖ ವಿಷಯವಾಗಿ ಚರ್ಚಿಸುತ್ತಿದ್ದೇವೆ. ಸುಮಾರು 8 ಲಕ್ಷ ಜನ ನೇರವಾಗಿ ಮತ್ತು ಪರೋಕ್ಷವಾಗಿ ಪಟಾಕಿ ಉದ್ಯಮದೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ನಮ್ಮ ಸಂತೋಷಕ್ಕಾಗಿ ಸಾಕಷ್ಟು ಸವಾಲುಗಳ ನಡುವೆ ಪಟಾಕಿಗಳನ್ನು ತಯಾರಿಸುತ್ತಾರೆ. ನಾವು ಅವರ ಸಂತೋಷಕ್ಕಾಗಿ ಪಟಾಕಿಗಳನ್ನು ಖರೀದಿಸಿ ಏಕೆ ಸಿಡಿಸಬಾರದು’ ಎಂದು ಪ್ರಶ್ನಿಸಿದ್ದಾರೆ.
‘ಪಟಾಕಿ ಸಿಡಿಸುವುದು ನಮ್ಮ ಸಂಸ್ಕೃತಿ ಮಾತ್ರವಲ್ಲ, ನಮ್ಮ ಜನರ ಜೀವನಾಧಾರ, ನಮ್ಮ ಶಿವಕಾಶಿ ಜನರ ಒಟ್ಟಾರೆ ಆರ್ಥಿಕತೆ. ನಮ್ಮ ಸಂತೋಷಕ್ಕಾಗಿ ಪಟಾಕಿಗಳನ್ನು ತಯಾರಿಸುವ ಕಾರ್ಮಿಕರ ಜೀವನೋಪಾಯಕ್ಕಾಗಿ ನಾವೆಲ್ಲರೂ ನಮ್ಮಿಂದ ಸಾಧ್ಯವಾದಷ್ಟು ಪಟಾಕಿಗಳನ್ನು ಖರೀದಿಸಿ ಸಿಡಿಸಬೇಕೆಂದು ನಾನು ವಿನಂತಿಸುತ್ತೇನೆ. ಒಂದು ದಿನ ಪಟಾಕಿಗಳನ್ನು ಹಚ್ಚುವುದರಿಂದ ಏನೂ ಆಗುವುದಿಲ್ಲ. ಇದರಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟದ ಮೂಲಕ ಸಾಲ ತೀರಿಸುವ ಕನಸು ಕಾಣುತ್ತಿರುವ ಲಕ್ಷಾಂತರ ಸಣ್ಣ ವ್ಯಾಪಾರಿಗಳ ಕನಸು ನನಸಾಗುತ್ತದೆ’ ಎಂದು ಅಣ್ಣಾಮಲೈ ಹೇಳಿದ್ದಾರೆ.

ಆದರೆ ಪಟಾಕಿ ಸಿಡಿಸುವಾಗ ಜಾಗರೂಕರಾಗಿರಿ, ಪ್ರಾಣಿಗಳು ಸೇರಿದಂತೆ ಅನೇಕ ಜೀವಿಗಳು ನಮ್ಮೊಂದಿಗೆ ವಾಸಿಸುತ್ತವೆ, ಅವುಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಿ. ಈ ದೀಪಾವಳಿ ಹಬ್ಬ ಪ್ರತಿಯೊಬ್ಬರ ಬಾಳಿನಲ್ಲಿ ಬೆಳಕು ಚೆಲ್ಲಲಿ ಎಂದು ಅಣ್ಣಾಮಲೈ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!