ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಸ್ಸೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್‌ನ ಬಾಗಿಲು ಪಕ್ಕದ ಸೀಟಿನಲ್ಲಿ ಕುಳಿತ ತಾಯಿ ಮಡಿಲಲ್ಲಿ ಇದ್ದ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಂತಹ ಆಘಾತಕಾರಿ ಘಟನೆ ನಡೆದಿದೆ.
ತಮಿಳುನಾಡಿನ ವಿರುಧುನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್ ಆಗಿದೆ. ವೀಡಿಯೋದಲ್ಲಿ ಕಾಣುವಂತೆ ಇದು ಖಾಸಗಿ ಬಸ್‌ನಂತೆ ಕಾಣುತ್ತಿದ್ದು, ಮುಂದಿನ ಬಾಗಿಲಿನ ಪಕ್ಕವೇ ಇರುವ ಸೀಟಿನಲ್ಲಿ ಮಹಿಳೆ ಹಾಗೂ ಅವರ ಸಂಬಂಧಿ ಕುಳಿತಿದ್ದರೆ, ಇಬ್ಬರ ಕೈಯಲ್ಲೂ ಒಂದೊಂದು ಮಗುವಿದೆ.
ತಾಯಿಯ ಕೈಯಲ್ಲಿ ಒಂದು ವರ್ಷದ ಪುಟ್ಟ ಮಗುವಿದ್ದು, ಆಕೆಯ ಪಕ್ಕ ಇದ್ದ ಸಂಬಂಧಿಯ ಕೈಯಲ್ಲಿ ಆ ಮಗುವಿಗಿಂತ ಸ್ವಲ್ಪ ದೊಡ್ಡ ಮಗುವಿದೆ. ಆದರೆ ಬಸ್ ಚಾಲಕ ಹಠಾತ್ ಆಗಿ ಬ್ರೇಕ್ ಹಾಕಿದ ರಭಸಕ್ಕೆ ಈ ಮುಂದಿನ ಸೀಟಿನಲ್ಲಿ ತಾಯಿಯ ಮಡಿಲಲ್ಲಿ ಇದ್ದ ಮಗು ಕೈ ಜಾರಿ ಕೆಳಗೆಬಿದ್ದಿದ್ದರೆ ಆಕೆಯ ಪಕ್ಕದಲ್ಲಿದ್ದ ಸಂಬಂಧಿ ಹಾಗೂ ಅವರ ಮಡಿಲಲ್ಲಿದ್ದ ಮಗು ಇಬ್ಬರು ಸೀಟಿನಿಂದ ಮುಗ್ಗರಿಸಿ ಬಸ್ಸೊಳಗೆಯೇ ಬಿದ್ದಿದ್ದಾರೆ.
ವಿರುಧುನಗರದ ಶ್ರಿವಿಲ್ಲಿಪುತ್ತುರ್ ಸಮೀಪದ ಮೀನಾಕ್ಷಿಪುರಂ ಜಂಕ್ಷನ್‌ನಲ್ಲಿ ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಘಟನೆಯಲ್ಲಿ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬದುಕುಳಿದಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಮಗುವನ್ನು ಈಗ ವೈದ್ಯರ ಮೇಲ್ವಿಚಾರಣೆಯಲ್ಲಿ ಇಡಲಾಗಿದೆ ಎಂದು ವರದಿಯಾಗಿದೆ.
ಈ ಮಗುವಿನ ಕುಟುಂಬದವರು ಮುಥುರ್‌ಮಲ್ಲಿಂಗಪುರಂ ನಿವಾಸಿಗಳಾಗಿದ್ದು, ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಬೆಳಗ್ಗೆ 8.30ರ ಸುಮಾರಿಗೆ ಬಸ್ ಮೀನಾಕ್ಷಿಪುರಂ ಸಿಗ್ನಲ್ ಬಳಿ ತಲುಪಿದಾಗ ಚಾಲಕ ಹಠಾತ್ ಬ್ರೇಕ್ ಹಾಕಿದ್ದು, ಈ ಅವಘಡಕ್ಕೆ ಕಾರಣವಾಗಿದೆ.