ಹೊಸದಿಗಂತ ವರದಿ ರಾಣೇಬೆನ್ನೂರು:
ಬಸ್‌ನಲ್ಲಿ ಸಿಕ್ಕ ಮೊಬೈಲ್ ಫೋನ್ ಅನ್ನು ಕಳೆದುಕೊಂಡ ಮಹಿಳೆಗೆ ಸುರಕ್ಷಿತವಾಗಿ ತಲುಪಿಸುವ ಮೂಲಕ ನಿರ್ವಾಹಕಿ ತನ್ನ ಪ್ರಾಮಾಣಿಕತೆಯನ್ನು ಮೆರೆದ ಘಟನೆ ರಾಣೇಬೆನ್ನೂರು ತಾಲೂಕಿನ ಗುಡಿಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರದಂದು ನಡೆದಿದೆ.
ಬೆ.8.15 ಕ್ಕೆ ರಾಣೇಬೆನ್ನೂರಿನಿಂದ ಚಂದಾಪುರಕ್ಕೆ ಹೊರಡುವ ಬಸ್ ನ ಮಾರ್ಗ ಮದ್ಯದ ಗ್ರಾಮವಾದ ಮೈದೂರಿನಿಂದ ಹೊನ್ನತ್ತಿಗೆ ತೆರಳಲು ಕೆಂಚವ್ವ ಹರಿಜನ ಎಂಬ ಮಹಿಳೆ ಬಸ್ ಹತ್ತಿ ನಂತರ ಹೊನ್ನತ್ತಿಯಲ್ಲಿ ಇಳಿದಿದ್ದಾಳೆ. ಇಳಿಯುವಾಗ ಮೊಬೈಲ್ ಬಸ್ ನಲ್ಲಿಯೇ ಬೀಳಿಸಿಕೊಂಡು ಹೊನ್ನತ್ತಿಯ ದೇವಸ್ಥಾನಕ್ಕೆ ಹೋಗಿದ್ದಾಳೆ.
ವನಜಾಕ್ಷಿ ಡಿ ಜೆ ಎಂಬ ಕೆಎಸ್ಆರ್ ಟಿಸಿ ಬಸ್ ನಿರ್ವಾಹಕಿಗೆ ಮೊಬೈಲ್ ಸಿಕ್ಕಿದೆ. ಯಾರಾದರೂ ಕೇಳಿದರೆ ಮೊಬೈಲ್ ಅವರದ್ದೇ ಅಂತಾ ಗೊತ್ತಾದರೆ ಕೊಟ್ಟರಾಯಿತು ಇಲ್ಲವಾದರೆ ಪೊಲೀಸರಿಗೆ ತಲುಪಿಸಿದರಾಯ್ತು ಎಂದು ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ:
ನಂತರ ಚಂದಾಪುರದಿಂದ ರಾಣೇಬೆನ್ನೂರಿಗೆ ವಾಪಾಸಾಗುವ ಸಂದರ್ಭದಲ್ಲಿ ಕೆಂಚಮ್ಮ ತಮ್ಮೂರಾದ ಮೈದೂರು ಗ್ರಾಮಕ್ಕೆ ತೆರಳಲು ಹೊನ್ನತ್ತಿಯಿಂದ ಪುನಃ ಅದೇ ಬಸ್‌ನ್ನು ಹತ್ತಿದ್ದಾಳೆ. ಬಸ್ ಹೊನ್ನತ್ತಿಯನ್ನು ಬಿಟ್ಟು ಅರ್ಧ ದಾರಿ ತಲುಪಿದಾಗ ಏಕಾಏಕಿ ಮಹಿಳೆಗೆ ಮೊಬೈಲ್ ನೆನಪಾಗಿ ಮೊಬೈಲ್ ತನ್ನ ಬಳಿ ಇಲ್ಲದಿರುವುದನ್ನು ಗಮನಿಸಿ ದೇವಸ್ಥಾನದಲ್ಲಿಯೇ ಬಿಟ್ಟು ಬಂದಿದ್ದೇನೆ ಎಂದುಕೊಂಡು ನಿರ್ವಾಹಕಿ ವನಜಾಕ್ಷಿ ಬಳಿ ಬಂದು ಬಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ.
ಯಾಕೆ ಏನಾಯ್ತು ಎಂದು ಮಹಿಳೆಯನ್ನು ನಿರ್ವಾಹಕಿ ಕೇಳಿದಾಗ ದೇವಸ್ಥಾನದಲ್ಲಿ ಮೊಬೈಲ್ ಬಿಟ್ಟಿದೇನಿ ನನ್ನ ಬಳಿ ಮೊಬೈಲ್ ಇಲ್ಲ ಎಂದು ಹೇಳಿದಾಗ ನಿರ್ವಾಹಕಿ ಎಂತಹ ಮೊಬೈಲ್? ಯಾವುದು? ನಂಬರ್ ಎಲ್ಲ ಮಾಹಿತಿ ಪಡೆದಾಗ ತನಗೆ ಸಿಕ್ಕ ಮೊಬೈಲ್ ತೋರಿಸಿದ್ದಾಳೆ. ಹೌದು ಮೇಡಂ ಇದೇ ನನ್ನ ಮೊಬೈಲ್ ಎಂದಾಗ ನಿರ್ವಾಹಕಿ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾಳೆ. ನಿರ್ವಾಹಕಿಯ ಪ್ರಾಮಾಣಿಕತೆಗೆ ಬಸ್ ನಲ್ಲಿದ್ದ ಪ್ರಯಾಣಿಕರು ನಿರ್ವಾಹಕಿ ಮಹಿಳೆಗೆ ಮರಳಿ ಮೊಬೈಲ್ ನೀಡುವ ಸನ್ನಿವೇಶವನ್ನು ಮೊಬೈಲ್ ನಲ್ಲಿ ಸೆರೆಹಿಡಿಯುವುದರ ಮೂಲಕ ಅವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



