ಹೊಸದಿಗಂತ ವರದಿ ಅಂಕೋಲಾ:
ಖಾಸಗಿ ಬಸ್ ಹಳ್ಳಕ್ಕೆ ಉರುಳಿ ಓರ್ವ ಮೃತಪಟ್ಟು 18 ಜನರು ಗಾಯಗೊಂಡ ಘಟನೆ ತಾಲೂಕಿನ ಅಗಸೂರು ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದ್ದು ಗಾಯಗೊಂಡವರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.
ಬೆಳಗಾವಿ ಕಡೆಯಿಂದ ಮಂಗಳೂರಿಗೆ ಹೊರಟಿದ್ದ ಸ್ಲೀಪರ್ ಕೋಚ್ ಖಾಸಗಿ ಬಸ್ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಅಗಸೂರು ಬಳಿ ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿದೆ ಎನ್ನಲಾಗುತ್ತಿದ್ದು ಬಸ್ಸಿನ ಹಿಂಬದಿ ಮೇಲ್ಬಾಗದ ಕೋಚಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಮೃತ ಪಟ್ಟಿದ್ದಾನೆ.
ಇಬ್ಬರು ಪುಟಾಣಿಗಳು ಸೇರಿದಂತೆ 18 ಜನರು ಗಾಯಗೊಂಡಿದ್ದು ಅಂಕೋಲಾ ಮತ್ತು ಕಾರವಾರ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು ಗಂಭೀರವಾಗಿ ಗಾಯಗೊಂಡ ಐದು ಜನರಲ್ಲಿ ಮೂವರನ್ನು ಬೆಳಗಾವಿ ಮತ್ತು ಇಬ್ಬರನ್ನು ಮಂಗಳೂರು ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆಂದು ಸಾಗಿಸಲಾಗಿದೆ.
ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯ ಚಾಲನೆ ಮತ್ತು ಹದಗೆಟ್ಟ ರಸ್ತೆಯಿಂದಾಗಿ ಬಸ್ಸು ನಿಯಂತ್ರಣ ತಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಗಳ ಜೊತೆಗೆ ಹೊಸದಿಗಂತ ಪತ್ರಿಕೆ ಸಾಗಾಟ ವಾಹನ ಚಾಲಕ ಜಾಕಿರ್ ಸಹಕಾರ ನೀಡಿದ್ದು, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಪ್ರಯಾಣಿಕರು ಸಹಕಾರ ನೀಡಿದ್ದಾರೆ.
ಕ್ರೇನ್ ಬಳಸಿ ಮೃತ ದೇಹವನ್ನು ಹೊರಕ್ಕೆ ತಗೆಯಲಾಗಿದ್ದು ಸ್ಥಳೀಯ ನೂರಾರು ಜನರು ಜಮಾಯಿಸಿ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.