ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಾದರಮಂಗಲ ರೈಲ್ವೆ ಪ್ಯಾರಲಲ್ ರಸ್ತೆ ಬಳಿ ಬಿಎಂಟಿಸಿ ಬಸ್ ಹಾಗೂ ರೈಲು ನಡುವೆ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರಿ ಪ್ರಮಾಣದ ಅನಾಹುತವೊಂದು ತಪ್ಪಿದೆ.
ಬಿಎಂಟಿಸಿ ಘಟಕ 51ಕ್ಕೆ ಸೇರಿದ ಬಸ್ ಸಾದರಮಂಗಲ ಮಾರ್ಗವಾಗಿ ಕಾಡುಗೋಡಿ ನಿಲ್ದಾಣಕ್ಕೆ ತೆರಳುತ್ತಿತ್ತು. ಈ ವೇಳೆ ರೈಲ್ವೆ ಪ್ಯಾರಲಲ್ ರಸ್ತೆ ಬಳಿ ಚಾಲಕ ಬಸ್ಸನ್ನು ರಿವರ್ಸ್ ತೆಗೆಯಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಬಸ್ ಚಲಿಸುತ್ತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಸ್ಸಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ. ಘಟನೆ ನಡೆದ ಸಮಯದಲ್ಲಿ ಬಸ್ಸಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಬಸ್ ಡಿಪೋದಿಂದ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರಣ ಕೇವಲ ಚಾಲಕ ಮಾತ್ರ ಇದ್ದರು ಎನ್ನಲಾಗಿದೆ. ಒಂದು ವೇಳೆ ಬಸ್ಸಿನಲ್ಲಿ ಪ್ರಯಾಣಿಕರಿದ್ದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಯಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಾಲಕನ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ರೈಲ್ವೆ ಹಳಿಗಳ ಸಮೀಪ ವಾಹನ ಚಾಲನೆ ಮಾಡುವಾಗ ತೋರಬೇಕಾದ ಕನಿಷ್ಠ ಜಾಗ್ರತೆಯನ್ನು ಚಾಲಕ ಮರೆತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.




