ಬ್ರೇಕ್ ಫೇಲ್ ಆಗಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಬಸ್, ನಾಲ್ವರು ಸಾವು, 25 ಮಂದಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಾಣಿಜ್ಯ ನಗರಿ ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬ್ರೇಕ್ ಫೇಲ್ ಆದ ಪರಿಣಾಮ ಪಾದಚಾರಿಗಳಿಗೆ ಬಸ್ ವೊಂದು ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ 25 ಮಂದಿ ಗಂಭೀರವಾಗಿ ಗಾಯಗೊಂಡು, ನಾಲ್ವರು ಸ್ಥಳದಲ್ಲೇ ದುರ್ಮರಣವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.

ಕುರ್ಲಾದ ಬೃಹನ್‌ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಬಿಎಂಸಿ) ಎಲ್ ವಾರ್ಡ್ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಘಟನೆ ಸಂಬಂಧ ಬಸ್ ಚಾಲಕನನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್‌ಪೋರ್ಟ್ (ಬೆಸ್ಟ್) ಸಂಸ್ಥೆಗೆ ಸೇರಿದ ಬಸ್ ಇದಾಗಿದ್ದು, ನೋಂದಣಿ ಸಂಖ್ಯೆ MH01-EM-8228 ರ ಬಸ್ ಕುರ್ಲಾ ರೈಲು ನಿಲ್ದಾಣದಿಂದ ಅಂಧೇರಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾರ್ಗ ಸಂಖ್ಯೆ 332 ರ ಬಳಿ ಚಾಲಕ ಬಸ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾನೆ. ಈ ವೇಳೆ ಬಸ್ ಪಾದಚಾರಿಗಳಿಗೆ ಮತ್ತು ಕೆಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಗಾಯಗೊಂಡ 25 ಮಂದಿಯನ್ನು ಸ್ಥಳೀಯ ಬಾಬಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನೆಯಲ್ಲಿ ಹಲವು ವಾಹನಗಳು ಜಖಂಗೊಂಡಿವೆ ಎಂದು ಹೇಳಿದ್ದಾರೆ.

ನಾನು ನನ್ನ ಸ್ನೇಹಿತರೊಂದಿಗೆ ರಾಯಲ್ ಸ್ವೀಟ್ಸ್ ಅಂಗಡಿಯ ಮುಂದೆ ನಿಂತಿದ್ದಾಗ ವೇಗವಾಗಿ ಬಂದ ಬಸ್ ಏಕಾಏಕಿ ಹಲವು ವಾಹನಗಳಿಗೆ ಹಾಗೂ ಪಾದಚಾರಿಗಳಿಗ ಗುದ್ದಿತು. ಬಳಿಕ ಬುದ್ಧ ಕಾಲೋನಿಗೆ ಪ್ರವೇಶಿಸಿತು. ಕೂಡಲೇ ಸ್ಥಳಕ್ಕೆ ತೆರಳಿ ಬಸ್ ಚಾಲಕನನ್ನು ವಾಹನದಿಂದ ಹೊರಗೆ ತಂದೆವು. ಘಟನೆ ಬಳಿಕ ಹಲವರು ರಕ್ತಸಿಕ್ತರಾಗಿ ಕೆಳಗೆ ಬಿದ್ದಿದ್ದರು. ಸಾಕಷ್ಟು ಜನರು ಸ್ಥಳ ಸೇರಿದ್ದರು. ಬಳಿಕ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದವು ಎಂದು ಪ್ರತ್ಯಕ್ಷದರ್ಶಿ ಝೀಶನ್ ಅನ್ಸಾರಿ ಎಂಬುವವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!