ಹೊಸದಿಗಂತ ವರದಿ ಕೊಪ್ಪಳ:
ತಾಲ್ಲೂಕಿನ ಶಹಾಪುರ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ರಸ್ತೆ ಬದಿಯ ಗುಂಡಿಯಲ್ಲಿ ಉರುಳಿ ಬಿದ್ದಿದ್ದು, 10 ಜನರಿಗೆ ಗಾಯಗಳಾಗಿವೆ. ಇದರಲ್ಲಿ ಇಬ್ಬರ ಸ್ಥಿತಿ ಗಂಭೀರ ವಾಗಿದೆ.
ಚಿತ್ತಾಪುರದಲ್ಲಿ ಮದುವೆ ಕಾರ್ಯ ಮುಗಿಸಿಕೊಂಡು ಕುಣಿಗಲ್ಗೆ ವಾಪಸ್ ಹೋಗುವಾಗ ಘಟನೆ ನಡೆದಿದೆ. ಬಸ್ನಲ್ಲಿ ಒಟ್ಟು 31 ಜನ ಇದ್ದರು. ಇದರಲ್ಲಿ 10ಕ್ಕೂ ಹೆಚ್ಚು ಜನರಿಗೆ ಸಣ್ಣ ಗಾಯಗಳಾಗಿವೆ.
ಗಾಯಗೊಂಡವರನ್ನು ರಾತ್ರಿಯೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ವಾಹನದಲ್ಲಿ ಸಿಲುಕಿ ಬಿದ್ದಿದ್ದ ಒಬ್ಬರನ್ನು ಸುಮಾರು ಒಂದು ತಾಸು ಕಾರ್ಯಾಚರಣೆ ನಡೆಸಿದ ಬಳಿಕ ಹೊರ ತಗೆಯಲಾಯಿತು. ಗಾಯಗೊಂಡವರೆಲ್ಲರೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಸಿದ್ರಾಮನಪಾಳ್ಯದವರು ಎಂದು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.