ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಲಾಟ್‌ಫಾರ್ಮ್ ಮೇಲೆ ನಿಂತಿದ್ದವರ ಮೇಲೆ ಸರ್ಕಾರಿ ಬಸ್ ಹರಿದು ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯವಾಡದಲ್ಲಿ ನಡೆದಿದೆ. ನಗರದ ಪಂಡಿತ್ ನೆಹರೂ ಬಸ್ ನಿಲ್ದಾಣದಲ್ಲಿ ಇಂದು ಬೆಳಗ್ಗೆ ನಡೆದ ಘಟನೆ ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದೆ.
ಬಸ್ ನಿಲ್ಲಿಸುವ ವೇಳೆ ಏಕಾಏಕಿ ಪ್ರಯಾಣಿಕರ ಮೇಲೆ ಹರಿದಿದ್ದು, ಮಗು, ಓರ್ವ ಮಹಿಳೆ ಹಾಗೂ ಕಂಡಕ್ಟರ್ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಚಕ್ರದಡಿ ಸಿಲುಕಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮೃತರನ್ನು ಕಂಡಕ್ಟರ್ ವೀರಯ್ಯ, ಕುಮಾರಿ ಎಂಬ ಮಹಿಳೆ ಮತ್ತು ಆಕೆಯ ಮೊಮ್ಮಗ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳ ಪರಿಶೀಲನೆ ನಡೆಸಿದ ಆರ್‌ಟಿಸಿ ಎಂಡಿ
ಆರ್‌ಟಿಸಿ ಎಂಡಿ ದ್ವಾರಕಾತಿರುಮಲ ರಾವ್ ವಿಜಯವಾಡ ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿದರು. ಬಸ್ಸಿನ ಬ್ರೇಕ್ ವೈಫಲ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೆ, ಅಪಘಾತಕ್ಕೆ ನಿಖರ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.