ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೀಕ್ಷೆ ಬರೆಯಲು ಉತ್ಸಾಹದಿಂದ ಕಾಲೇಜಿಗೆ ಹೊರಟಿದ್ದ ವಿದ್ಯಾರ್ಥಿಯೊಬ್ಬ ಸಾರಿಗೆ ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ಸಂಭವಿಸಿದೆ.
ಹಾವೇರಿ ತಾಲೂಕಿನ ಕೊಣನತಂಬಿಗಿ ಗ್ರಾಮದ ನಿವಾಸಿಯಾದ ರೋಹಿತ್ ಕೆಸರಳ್ಳಿ ಅಪಘಾತಕ್ಕೊಳಗಾದ ದುರ್ದೈವಿ. ಈತ ಹಾವೇರಿ ನಗರದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇಂದು ಪರೀಕ್ಷೆ ಇದ್ದ ಕಾರಣ, ಹಾಸ್ಟೆಲ್‌ನಿಂದ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಕಾಲೇಜಿಗೆ ತೆರಳಲು ಸಿದ್ಧನಾಗಿದ್ದನು. ಈ ವೇಳೆ ವೇಗವಾಗಿ ಬಂದ ಸಾರಿಗೆ ಬಸ್ ವಿದ್ಯಾರ್ಥಿಗೆ ಏಕಾಏಕಿ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ರೋಹಿತ್‌ನ ಬೆನ್ನು ಮತ್ತು ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿದೆ. ತಕ್ಷಣವೇ ಸ್ಥಳೀಯರು ಆತನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ ನಿಲ್ದಾಣದಂತಹ ಜನನಿಬಿಡ ಪ್ರದೇಶದಲ್ಲಿ ಚಾಲಕರ ಅಜಾಗರೂಕತೆಯೇ ಇಂತಹ ಅವಘಡಗಳಿಗೆ ಕಾರಣವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

