ಹೊಸದಿಗಂತ ವರದಿ, ಕಲಬುರಗಿ:
ಕಮಲಾಪುರ ಬಳಿ ಶುಕ್ರವಾರ ನಡೆದ ಭೀಕರ್ ಬಸ್ ದುರಂತದಲ್ಲಿ ಗಾಯಗೊಂಡು ನಗರದ ಯುನೈಟೆಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿ, ಧೈರ್ಯ ತುಂಬಿದರು.
ಈ ವೇಳೆ ಶಾಸಕ ರೇವೂರ್, ಯುನೈಟೆಡ್ ಆಸ್ಪತ್ರೆ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಪ್ರತಿ ಗಾಯಾಳುವಿನ ಮಾಹಿತಿ ಪಡೆದರು.
ಸರ್ಕಾರದ ವತಿಯಿಂದ ಏನೆಲ್ಲ ಸಹಾಯ ನೀಡಲು ಸಾಧ್ಯವಿದೆ ಅದನ್ನೆಲ್ಲ ಒದಗಿಸಿ ಕೊಡಲಾಗುವುದು ಎಂದು ಗಾಯಾಳುಗಳಿಗೆ ಈ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು.
ಘಟನೆಯಲ್ಲಿ ಮೃತ ಹಾಗೂ ಗಾಯಾಳುಗಳು ಮುನ್ನೂರ ರೆಡ್ಡಿ ಸಮಾಜದವರು ಆಗಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಮುನ್ನೂರ ರೆಡ್ಡಿ ಸಮಾಜದ ಮುಖಂಡರಾದ ಸೀತಾರಾಂ ರೆಡ್ಡಿ , ಶರಣ ರೆಡ್ಡಿ ಹಾಗೂ ರಾಮು ರೆಡ್ಡಿ ಶಾಸಕರೊಂದಿಗೆ ಆಗಮಿಸಿದರು.