ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಮಾಜಿ ರೌಡಿಶೀಟರ್ ಯಶಸ್ವಿನಿ ಗೌಡ (47) ಅವರನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಬಂಧಿಸಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಉದ್ಯಮಿ ಹೆಚ್.ವಿ.ಮನೋಜ್ ಕುಮಾರ್ ಎಂಬವರನ್ನು ಅಪಹರಿಸಿ ಬೆದರಿಸಿದ್ದ ಆರೋಪದಡಿ ರಾಜೇಶ್, ಸೀನಾ ಅಲಿಯಾಸ್ ಬಾಂಬೆ ಸೀನಾ, ಲೋಕೇಶ್ ಕುಮಾರ್, ನವೀನ್ ಕುಮಾರ್, ಸೋಮಯ್ಯ ಮತ್ತು ಯುಕೇಶ್ ಎಂಬ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ರೌಡಿಶೀಟರ್ ಬೇಕರಿ ರಘು ಕೈವಾಡ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ, ಆತನನ್ನು ಸಹ ಇತ್ತೀಚೆಗೆ ಮಂಡ್ಯದಲ್ಲಿ ಬಂಧಿಸಲಾಗಿತ್ತು. ಆಗ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದ ಮೇಲೆ ಯಶಸ್ವಿನಿ ಗೌಡ ವಿರುದ್ಧ ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಬಸವನಗುಡಿ ಪೊಲೀಸ್ ಠಾಣೆಯ ಮಾಜಿ ರೌಡಿಶೀಟರ್ ಯಶಸ್ವಿನಿ ಪಾತ್ರವಿರುವುದು ಕಂಡಬಂದಿತ್ತು. ಪುಟ್ಟೇನಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಯಶಸ್ವಿನಿಯನ್ನು ಕೋಕಾ ಕಾಯ್ದೆಯಡಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.



