ಹೊಸದಿಗಂತ ವರದಿ, ವಿಜಯಪುರ:
ಬೆಂಗಳೂರಿನ ಕೆಫೆಯಲ್ಲಿ ಬಾಂಬ್ ಸ್ಫೋಟ ಉದ್ದೇಶಪೂರ್ವಕವಾಗಿ ಮಾಡಿದ ಘಟನೆಯಾಗಿದೆ.ದೇಶದಲ್ಲಿ ಅಸ್ಥಿರತೆ ಉಂಟು ಮಾಡಲು ಬ್ಲಾಸ್ಟ್ ಮಾಡಲಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.
ಬೆಂಗಳೂರಿನ ಬಾಂಬ್ ಸ್ಫೋಟ ಪ್ರಕರಣ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ಭಯದ ವಾತಾವರಣ ಉಂಟು ಮಾಡೋ ಉದ್ದೇಶ ಇದಾಗಿದೆ ಎಂದರು.
ಸಚಿವ ಶರಣ ಪ್ರಕಾಶ ಪಾಟೀಲ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ಶರಣಪ್ರಕಾಶ ಪಾಟೀಲ ಹಾಗೇ ಹೇಳುತ್ತಾರೆ. ಮಂಗಳೂರಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ನಮ್ಮ ಬ್ರದರ್ಸ್ ಮಾಡಿಲ್ಲ ಎಂದಿದ್ದರು. ಈಗ ಬ್ರದರ್ಸ್ ಏನ್ ಹೇಳ್ತಿದ್ದಾರೆ. ಕುಕ್ಕರ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆಯಿದೆ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಡಿಸಿಎಂ ಮಂಗಳೂರಿನ ಘಟನೆಗೂ, ಬೆಂಗಳೂರಿನ ಘಟನೆಗೂ ಸಾಮ್ಯತೆ ಇದೆ ಎಂದು ಹೇಳುತ್ತಾರೆ. ಆದರೆ, ಸಿಎಂ ಸಿದ್ದರಾಮಯ್ಯ ಎರಡು ಪ್ರಕರಣಗಳಲ್ಲಿ ಸಾಮ್ಯತೆ ಇಲ್ಲ, ಎರಡು ಕೂಡ ಬೇರೆ ಬೇರೆ ಎನ್ನುತ್ತಿದ್ದಾರೆ. ಎರಡು ಕೂಡ ಬೇರೆ ಬೇರೆ ಪ್ರಕರಣಗಳೇ ಎಂದರು.
ಬ್ಲಾಸ್ಟ್ ಪ್ರಕರಣದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು, ದೇಶದ ಆಂತರಿಕ ಭದ್ರತೆ ಇರೋ ಕಾರಣ ರಾಜ್ಯ ಸರ್ಕಾರ ಬ್ಲಾಸ್ಟ್ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಬಾರದು . ಸ್ಫೋಟದ ಕುರಿತು ತನಿಖೆ ನಡೆಯುತ್ತಿದೆ. ಸತ್ಯ ಹೊರಬರಲಿದೆ ಎಂದರು.