ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ ಹಾಗೂ ಟೋಲ್ ಶುಲ್ಕದ ಹೆಚ್ಚಳದ ವಿರುದ್ಧ ನಾಳೆ ಮಧ್ಯರಾತ್ರಿಯಿಂದ ರಾಜ್ಯ ಲಾರಿ ಮಾಲೀಕರ ಸಂಘ ಅನಿರ್ದಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ. ಆರ್. ಷಣ್ಮುಗಪ್ಪ, ನಾಳೆ ಮಧ್ಯರಾತ್ರಿಯಿಂದ ಲಾರಿ ಮುಷ್ಕರ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ, ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಲಾರಿಗಳಿದ್ದು, ಮುಷ್ಕರ ಬೆಂಬಲಿಸುವ ಮೂಲಕ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಜಲ್ಲಿಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ ಎಲ್ಲಾ ಮಾದರಿಯ ಸರಕು ಸೇವೆಗಳು ಸ್ಥಗಿತಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.
ಈ ಮುಷ್ಕರಕ್ಕೆ ಫೆಡರೇಶನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ನಾವು ಈ ಮುಷ್ಕರವನ್ನು ಬೆಂಬಲಿಸುವುದಿಲ್ಲ. ಲಾರಿಗಳು ಎಂದಿನಂತೆ ಸಂಚರಿಸಲಿವೆ. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದಿದ್ದಾರೆ.