ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಬಾ ಪ್ರೀತಿಯಿಂದ ಸಾಕಿದ ಒಂಟೆ ತನ್ನ ಯಜಮಾನನ ಪ್ರಾಣ ತೆಗೆದಿರುವ ದಾರುಣ ಘಟನೆ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯಲ್ಲಿ ಮೃತಪಟ್ಟ ಮಹಿಳೆಯನ್ನು ತೋತಾ ದೇವಿ ಎಂದು ಗುರುತಿಸಲಾಗಿದೆ.
‘ಪಪ್ಪು ಬಾಘೆಲ್’ ಸಾಸ್ನಿ ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ಗೋಯ್ ಗ್ರಾಮದ ನಿವಾಸಿ. ಅವನ ಹೆಂಡತಿಯ ಹೆಸರು ‘ತೋತಾದೇವಿ’. ಪಪ್ಪು ಬಾಘೆಲ್ ದಂಪತಿ ಒಂಟೆಯನ್ನು ಕೃಷಿ ಉಪಕರಣಗಳು ಮತ್ತು ಇತರ ವಸ್ತುಗಳನ್ನು ಸಾಗಿಸಲು ಬಳಸುತ್ತಾರೆ. ಅವರ ಬಳಿ ಎತ್ತಿನ ಬಂಡಿಯೂ ಇದೆ. ಎಂದಿನಂತೆ ಭಾನುವಾರ (ಜುಲೈ 2) ಮಧ್ಯಾಹ್ನ ಒಂಟೆಗೆ ನೀರು ಕುಡಿಸಲು ದೇವಿ ಹೋಗಿದ್ದಳು. ಆ ವೇಳೆ ಆಕೆಯ ಮೇಲೆ ಒಂಟೆ ದಾಳಿ ಮಾಡಿತ್ತು.
ಮೊದಲು ತೋತಾ ದೇವಿಯ ಕೈ ಕಚ್ಚಿದ್ದು, ನಂತರ ಆಕೆ ತಲೆಯನ್ನು ತನ್ನ ಎರಡು ದವಡೆಗಳ ನಡುವೆ ಬಿಗಿ ಹಿಡಿದಿದೆ. ತೋತಾದೇವಿಯ ಕಿರುಚಾಟ ಕೇಳಿ ಸುತ್ತಮುತ್ತಲ ಜನರು ಅಲ್ಲಿಗೆ ತಲುಪಿದರು. ಒಂಟೆಯನ್ನು ಕೋಲುಗಳಿಂದ ಹೊಡೆದು ಅದರ ಬಾಯಿಯಿಂದ ದೇವಿಯನ್ನು ಬಿಡಿಸಿದರು. ಆದರೆ ಆಕೆ ಅದಾಗಲೇ ಮೃತಪಟ್ಟಿದ್ದಳು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲು ತೋತಾದೇವಿ ಸಂಬಂಧಿಕರು ನಿರಾಕರಿಸಿದ್ದು, ಈ ವೇಳೆ ಪೊಲೀಸರು ಹಾಗೂ ಸಂಬಂಧಿಕರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಕುಟುಂಬಸ್ಥರು ಭಾನುವಾರ ಆಕೆಯ ಅಂತಿಮ ಸಂಸ್ಕಾರ ನಡೆಸಿದರು.