ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗಿನ ಜನಪ್ರಿಯ ನಟ ನಾನಿ ಸಿನಿಮಾದ ಸೆಟ್ನಲ್ಲಿ ಕ್ಯಾಮೆರಾ ಸಹಾಯಕಿಯೊಬ್ಬರು ನಿಧನರಾಗಿದ್ದಾರೆ.
ನಾನಿ ನಟನೆಯ ‘ಹಿಟ್ 3’ ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯುತ್ತಿದೆ. ಸಿನಿಮಾದ ಸಿನಿಮಾಟೊಗ್ರಫರ್ ತಂಡದಲ್ಲಿ ಸಹಾಯಕಿಯಾಗಿ ಕೆಆರ್ ಕೃಷ್ಣ ಹೆಸರಿನ ಯುವತಿ ಕೆಲಸ ಮಾಡುತ್ತಿದ್ದರು. 30 ವರ್ಷದ ಈ ಯುವತಿ ಸೆಟ್ನಲ್ಲಿಯೇ ನಿಧನ ಹೊಂದಿದ್ದಾರೆ.|
ಚಿತ್ರೀಕರಣ ನಡೆಯುವಾಗಲೇ ಯುವತಿ ಕೃಷ್ಣ ಎದೆ ನೋವಿನಿಂದ ಬಳಲು ಆರಂಭಿಸಿದರು. ಕೂಡಲೇ ಅವರನ್ನು ಶ್ರೀನಗರ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಕೃಷ್ಣ, ತಮ್ಮ ಕುಟುಂಬದವರೊಡನೆ ಫೋನ್ನಲ್ಲಿ ಮಾತನಾಡಿದ್ದಾರೆ. ಆ ನಂತರ ಕೃಷ್ಣ ಅವರನ್ನು ಜನರಲ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಅದಾದ ಬಳಿಕ ಯುವತಿ ನಿಧನ ಹೊಂದಿದ್ದಾರೆ.
ಕಾಶ್ಮೀರದ ಚಳಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಕಾರಣ ಯುವತಿಗೆ ಎದೆಯಲ್ಲಿ ಸೋಂಕು ಕಾಣಿಸಿಕೊಂಡಿತ್ತು ಮತ್ತು ತೀವ್ರ ಹೃದಯಾಘಾತವೂ ಆದ ಕಾರಣ ಯುವತಿ ನಿಧನ ಹೊಂದಿದ್ದಾರೆ ಎನ್ನಲಾಗಿದೆ. ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ ನ ಸದಸ್ಯೆ ಆಗಿದ್ದ ಕೃಷ್ಣ, ಸ್ವತಂತ್ರ್ಯ ಸಿನಿಮಾಟೊಗ್ರಾಫರ್ ಆಗುವ ಕನಸು ಹೊಂದಿದ್ದರು. ಕೆಲ ವರ್ಷಗಳಿಂದ ಸಿನಿಮಾಟೊಗ್ರಫಿ ಸಹಾಯಕಿಯಾಗಿ ಅವರು ಕೆಲಸ ಮಾಡುತ್ತಿದ್ದರು.
ಕೃಷ್ಣ ನಿಧನದಿಂದ ಆಘಾತಕ್ಕೆ ಒಳಗಾದ ಚಿತ್ರತಂಡ, ಸಿನಿಮಾದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.