ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಅಸಮಾಧಾನ ಭುಗಿಲೆದಿದ್ದು , ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ. ಸ್ವಪಕ್ಷ ಲಿಬರಲ್ ನ 24 ಸದಸ್ಯರು ಟ್ರುಡೊ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದು ರಾಜಕೀಯವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಲಿಬರಲ್ ಪಕ್ಷವು ಬುಧವಾರ ಮುಚ್ಚಿದ ಬಾಗಿಲಿನ ಸಭೆ ನಡೆಸಿದ್ದು, ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ಹಾನಿಯಾಗಲು ಪ್ರಧಾನಿ ಟ್ರುಡೊ ಅವರ ಧೋರಣೆಯೇ ಕಾರಣ ಎಂದು ಅದರ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.
ಬುಧವಾರ ನಡೆದ ಸಂಸದರ ಸಭೆಯಲ್ಲಿ ಭಾರೀ ಅಸಮಾಧಾನ ಸ್ಫೋಟಗೊಂಡಿದೆ. 24 ಸಂಸದರು ಅ.28ರ ಒಳಗಡೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ.
ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಕಳಪೆ ಸಾಧನೆಗೆ ಟ್ರುಡೋ ಅವರ ನಾಯಕತ್ವವೇ ಕಾರಣ ಎಂದು ಸದಸ್ಯರು ಬಹಿರಂಗವಾಗಿಯೇ ಹೇಳಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ಕೆನಾಡದ ಮಾಧ್ಯಮಗಳು ವರದಿ ಮಾಡಿವೆ.
ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸಂಸದರಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಕ್ಯಾಬಿನೆಟ್ ಮಂತ್ರಿ ಸ್ಥಾನ ಹೊಂದಿರದ ಸುಮಾರು 20 ಮಂದಿ ಸದಸ್ಯರು ಮುಂದಿನ ಚುನಾವಣೆಗೆ ಮೊದಲು ಟ್ರುಡೊ ಅವರನ್ನು ಪ್ರಧಾನಿ ಪಟ್ಟದಿಂದ ಕೆಳಗೆ ಇಳಿಸಬೇಕೆಂದು ಆಗ್ರಹಿಸಿದ್ದಾರೆ ಎಂದು ವರದಿಯಾಗಿದೆ.