ಯುಪಿಯಲ್ಲಿ ಪೊಲೀಸ್ ಪರೀಕ್ಷೆ ರದ್ದು: ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಉತ್ತರ ಪ್ರದೇಶ ಸರ್ಕಾರ ಪೊಲೀಸ್‌ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಿರುವುದು, ಯುವಕರ ಒಗ್ಗಟ್ಟು ಮತ್ತು ವಿದ್ಯಾರ್ಥಿ ಶಕ್ತಿಗೆ ದೊರೆತ ಬಹುದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ನಡೆದ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿತ್ತು.ಈ ಸಂಬಂಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪರೀಕ್ಷೆ ರದ್ದುಪಡಿಸಿರುವ ಸರ್ಕಾರ, ಆರು ತಿಂಗಳೊಳಗೆ ಮರುಪರೀಕ್ಷೆ ನಡೆಸುವಂತೆ ಆದೇಶಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಾಹುಲ್‌, ‘ಉತ್ತರ ಪ್ರದೇಶ ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ವಿದ್ಯಾರ್ಥಿ ಶಕ್ತಿ ಹಾಗೂ ಯುವಕರ ಒಗ್ಗಟ್ಟಿಗೆ ದೊರೆತ ಬಹುದೊಡ್ಡ ಜಯ ಇದಾಗಿದೆ. ಸತ್ಯವನ್ನು ಹತ್ತಿಕ್ಕಲು ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ, ಒಗ್ಗಟ್ಟಾಗಿ ಹೋರಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂಬುದು ಇದರಿಂದ ಸ್ಪಷ್ಟವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಎಲ್ಲರನ್ನು ಒಂದುಗೂಡಿಸುವವರು ಗೆಲ್ಲುತ್ತಾರೆ. ವಿಭಜಿಸುವವರು ತತ್ತರಿಸಿಹೋಗಲಿದ್ದಾರೆ’ ಎಂದೂ ಹೇಳಿದ್ದಾರೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ‘ಸರ್ಕಾರ ಯುವಕರೆದುರು ತಲೆಬಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!