ಹೊಸದಿಗಂತ ವರದಿ, ಕಾರವಾರ:
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ಪರ ಯೋಜನೆಗಳನ್ನು ರದ್ದು ಪಡಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಭಾರತೀಯ ಜನತಾ ಪಕ್ಷದ ರೈತ ಮೋರ್ಛಾ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಜಾರಿಗೆ ತಂದ ರೈತ ಪರ ಯೋಜನೆಗಳನ್ನು ರದ್ದು ಪಡಿಸಿ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
ಜಿಲ್ಲಾ ಯುವ ಮೋರ್ಛಾ ಅಧ್ಯಕ್ಷ ಮಹೇಶ ಹೊಸಕೊಪ್ಪ ಗೋ ಶಾಲೆಗೆ ಅನುದಾನ ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರ ರೈತರ ಮಕ್ಕಳಿಗೆ ಅನುಕೂಲಕರ ಯೋಜನೆಗಳನ್ನು ರದ್ದು ಪಡಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದರು.
ರೈತ ಮೋರ್ಛಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ ಮಾತನಾಡಿ ಬಡವರ ಮತ್ತು ರೈತರ ವಿರೋಧಿ ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ ವಿವಿಧ ಹಂತಗಳ ಪ್ರತಿಭಟನೆ ನಡೆಸಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ, ಪ್ರಭಾರಿ ಎನ್. ಎಸ್. ಹೆಗಡೆ, ಮಾಜಿ ಶಾಸಕ ಸುನೀಲ ಹೆಗಡೆ, ಹಿಂದುಳಿದ ವರ್ಗಗಳ ಮೋರ್ಛಾ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ ರೈತ ಮೋರ್ಛಾ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.