ಹೊಸದಿಗಂತ ವರದಿ ಹುಬ್ಬಳ್ಳಿ:
ಹಿಂದೂ, ಮಸ್ಲಿಂ ಕುರಿತು ಮಾತನಾಡುವುದು ಬಿಟ್ಟು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಏನು ಗೊತ್ತಿಲ್ಲ. ಯಾವುದೇ ಕಾರಣಕ್ಕೂ ನನ್ನನ್ನು ಸಚಿವ ಸಂಪುಟದಿಂದ ಕಿತ್ತು ಹಾಕಲು ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸಚಿವ ಸಂಪುಟದಿಂದ ಕೈಬಿಡಬೇಕು ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಬುಧವಾರ ಸುದ್ದಿಗಾರರೊಂದಿಗೆ ಈ ರೀತಿ ಪ್ರತಿಕ್ರಿಯಿಸಿದರು. ಬಿಜೆಪಿಗೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ಕಾರಣಕ್ಕೆ ನಮ್ಮನ್ನು ವಿರೋಧಿಸುತ್ತಾರೆ. ಮತ ಹಾಕಿದರೆ ಮಾತ್ರ ನಾವು ಒಳ್ಳೆಯವರು. ಇಲ್ಲದಿದ್ದರೆ ಈ ರೀತಿ ಮಾತನಾಡುತ್ತಾರೆ ಎಂದರು.
ಅನ್ನದಾತನಾದ ರೈತರ ಆಸ್ತಿ ಯಾವುದೇ ಕಾರಣಕ್ಕೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಕಾನೂನು ಎಂಬ ಮಾನದಂಡವಿದೆ. ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದಲ್ಲಿ ಉಪಚುನಾವಣೆ ಇರುವುದರಿಂದ ಬಿಜೆಪಿ ಈ ವಿಷಯವಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ ಎಂದು ಹರಿಹಾಯ್ದರು.
ನಾನು ಭಾರತೀಯ. 24 ಕ್ಯಾರೆಟ್ ಚಿನ್ನ. ಕೋಮು ದ್ವೇಷ ಹರಡುವ ಕೆಲಸವನ್ನು ಎಂದೂ ಮಾಡಿಲ್ಲ. ಭಾರತದಲ್ಲಿ ಇರುವವರೆಲ್ಲರೂ ಭಾರತೀಯರು. ಪ್ರಹ್ಲಾದ ಜೋಶಿ ಅವರು ರಾಜಕೀಯದಲ್ಲಿ ಜಾತಿ ಮಾಡಬಾರದು. ಮಾಡುವುದಿದ್ದರೆ ಮನೆಯಲ್ಲಿ ಮಾಡಿಕೊಳ್ಳಲಿ ಎಂದು ಹೇಳಿದರು.