February 16, 2026
Monday, February 16, 2026
spot_img

ನಿದ್ದೆ ಮಂಪರಿನಲ್ಲಿ ಶಾಲಾ ಬಸ್‌ಗೆ ಡಿಕ್ಕಿ ಹೊಡೆದ ಕ್ಯಾಂಟರ್‌ ಚಾಲಕ: ಭಯಾನಕ ಅಪಘಾತಕ್ಕೆ ಬೆಚ್ಚಿಬಿದ್ದ ದಕ್ಷಿಣ ಕನ್ನಡ

ಹೊಸದಿಗಂತ ವರದಿ ಉಳ್ಳಾಲ:

ಖಾಸಗಿ ಶಾಲಾ ಬಸ್ಸಿನ ಹಿಂಬದಿಗೆ ಮೀನು ಸಾಗಾಟ ನಡೆಸುತ್ತಿದ್ದ ಕ್ಯಾಂಟರ್ ಬಂದು ಡಿಕ್ಕಿ ಹೊಡೆದ ಘಟನೆ ಮಂಗಳೂರು ಹೊರವಲಯದ ರಾಷ್ಟ್ರೀಯ ಹೆದ್ದಾರಿ 66 ರ ಕಾಪಿಕಾಡು ಎಂಬಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ಈ ಭೀಕರ ಅಪಘಾತದಲ್ಲಿ ಏಳು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಬಸ್‌ ನಜ್ಜುಗುಜ್ಜಾಗಿರುವ ದೃಶ್ಯವನ್ನು ನೋಡಿದರೆ ಮಕ್ಕಳು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಬಹುದು.

ತಲಪಾಡಿಯ ಶಿಕ್ಷಣ ಸಂಸ್ಥೆಯೊಂದಕ್ಕೆ ಸೇರಿದ ಬಸ್‌ ಇದಾಗಿದ್ದು, ಇಂದು ಬೆಳಗ್ಗೆ ಕಾಪಿಕಾಡುವಿನ ಹೆದ್ದಾರಿ ಅಂಚಿನಲ್ಲಿ ವಿದ್ಯಾರ್ಥಿಗಳನ್ನ ಹತ್ತಿಸಿಕೊಂಡು ತಲಪಾಡಿ ಕಡೆಗೆ ಹೊರಟಿತ್ತು. ಈ ವೇಳೆ ಹಿಂದಿನಿಂದ ಧಾವಿಸಿ ಬಂದ ಮೀನಿನ ಕ್ಯಾಂಟರ್ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶಾಲಾ ಬಸ್ಸಿನ ಹಿಂಭಾಗದ ಸೀಟುಗಳೇ ಕಿತ್ತು ಹೋಗಿವೆ.

ಗೋವಾದಿಂದ ಕೇರಳಕ್ಕೆ ಮೀನು ಸಾಗಿಸುತ್ತಿದ್ದ ಕ್ಯಾಂಟರ್‌ ಚಾಲಕ ಸಂಜೀವ ನಿದ್ದೆ ಮಂಪರಿನಲ್ಲಿ ಗಾಡಿ ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಘಟನೆಯಿಂದ ಬಸ್ಸಿನೊಳಗಿದ್ದ ಹೈಸ್ಕೂಲ್ನ ನಾಲ್ಕು ವಿದ್ಯಾರ್ಥಿಗಳು ಹಾಗೂ ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ.

ಮೂವರು ವಿದ್ಯಾರ್ಥಿನಿ ಮತ್ತು ಮೂವರು ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಅವರು ಚೇತರಿಸಿಕೊಂಡಿದ್ದಾರೆ. ಮತ್ತೋರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯವಾಗಿದ್ದು ಆತನನ್ನ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪರೀಕ್ಷೆ ನಡೆಯುತ್ತಿದ್ದುದರಿಂದ ಬಸ್ಸಿನಲ್ಲಿ 24 ರಷ್ಟು ವಿದ್ಯಾರ್ಥಿಗಳಿದ್ದರು.

ಘಟನೆಯಿಂದ ಕ್ಯಾಂಟರ್ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ತೊಕ್ಕೊಟ್ಟಿನ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಅಪಘಾತದ ಸುದ್ದಿ ತಿಳಿದು ವಿದ್ಯಾರ್ಥಿಗಳ ಪೋಷಕರು ಗಾಬರಿಗೊಂಡು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಸರ್ವಿಸ್ ರಸ್ತೆ ಇಲ್ಲದೆ ನಿತ್ಯ ಅವಾಂತರ:
ನಂತೂರು – ತಲಪಾಡಿಯ ಹೆದ್ದಾರಿಯು ಅಗಲೀಕರಣಗೊಂಡು ದಶಕಗಳೇ ಕಳೆದರೂ ಸಹ ಈ ಹೆದ್ದಾರಿಯಲ್ಲಿ ಸಮರ್ಪಕ ಸರ್ವಿಸ್ ರಸ್ತೆಗಳೇ ಇಲ್ಲದೆ ಶಾಲಾ ವಾಹನಗಳು ,ಖಾಸಗಿ ಬಸ್ಸುಗಳು ಮುಖ್ಯ ಹೆದ್ದಾರಿ ಅಂಚಿನಲ್ಲೇ ನಿಲ್ಲಿಸಿ ಶಾಲಾ ಮಕ್ಕಳು ಮತ್ತು ಪ್ರಯಾಣಿಕರನ್ನು ಪಿಕ್ ಅಪ್ ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಅಪರಿಮಿತ ವೇಗದಲ್ಲಿ ಸಾಗುವ ಸರಕು ವಾಹನಗಳ ಚಾಲಕರಿಗೆ ಇದರ ಅರಿವಿಲ್ಲದ ಕಾರಣ ನಿರಂತರ ಅಪಘಾತಗಳು ನಡೆಯುತ್ತಲೇ ಇವೆಯೆಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !