Wednesday, November 5, 2025

ವಿಶ್ವಕಪ್ ಗೆದ್ದ ‘ಕ್ಯಾಪ್ಟನ್ ಕೌರ್’ ಮೈಮೇಲೆ ಅಚ್ಚಾದ ವಿಜಯದ ಸಂಕೇತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಕೊನೆಗೂ ತನ್ನ ದೀರ್ಘಕಾಲದ ಐಸಿಸಿ ಟ್ರೋಫಿ ಬರವನ್ನು ನೀಗಿಸಿಕೊಂಡಿದೆ. ಭಾನುವಾರದಂದು ನಡೆದ ರೋಚಕ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ಹರ್ಮನ್​ಪ್ರೀತ್ ಕೌರ್ ನಾಯಕತ್ವದ ಟೀಮ್ ಇಂಡಿಯಾ, ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ.

ಈ ಐತಿಹಾಸಿಕ ವಿಜಯವನ್ನು ಶಾಶ್ವತವಾಗಿ ಸ್ಮರಿಸಲು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ವಿಭಿನ್ನ ಹೆಜ್ಜೆ ಇಟ್ಟಿದ್ದಾರೆ. ವಿಶ್ವಕಪ್ ಫೈನಲ್ ಮುಗಿದ ಮರುದಿನವೇ ಅವರು ತಮ್ಮ ತೋಳಿನ ಮೇಲೆ ವಿಶ್ವಕಪ್ ಟ್ರೋಫಿಯ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಿಸಿದೆ.

ಟ್ಯಾಟೂದಲ್ಲಿ ಅಡಗಿದೆ ಐತಿಹಾಸಿಕ ’52’ ರಹಸ್ಯ!

ಹರ್ಮನ್‌ಪ್ರೀತ್ ಅವರು ಹಂಚಿಕೊಂಡಿರುವ ಫೋಟೋಗಳಲ್ಲಿ, ಟ್ರೋಫಿಯ ಟ್ಯಾಟೂವಿನ ಜೊತೆಗೆ ವಿಶ್ವಕಪ್ ಗೆದ್ದ ವರ್ಷ ಮತ್ತು ಪ್ರಮುಖ ಸಂಖ್ಯೆ ’52’ ಅನ್ನು ಬರೆಸಿದ್ದಾರೆ. ಈ ’52’ ಸಂಖ್ಯೆಯು ಎರಡು ವಿಶೇಷ ಅರ್ಥಗಳನ್ನು ಹೊಂದಿದೆ:

52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು 52 ರನ್‌ಗಳಿಂದ ಸೋಲಿಸಿ ಟ್ರೋಫಿ ಗೆದ್ದಿದೆ.

ಈ ಭಾವನಾತ್ಮಕ ಟ್ಯಾಟೂ ಫೋಟೋವನ್ನು ಹಂಚಿಕೊಂಡು ಹರ್ಮನ್, “ಇದು ನನ್ನ ಚರ್ಮ ಮತ್ತು ಹೃದಯದಲ್ಲಿ ಶಾಶ್ವತವಾಗಿ ಅಚ್ಚೊತ್ತಿದೆ,” ಎಂದು ಬರೆದಿದ್ದಾರೆ.

6084 ದಿನಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ!

ಹರ್ಮನ್‌ಪ್ರೀತ್ ಕೌರ್ ಅವರು ಮಾರ್ಚ್ 7, 2009 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪ್ರವೇಶಿಸಿದ ಮೊದಲ ದಿನದಿಂದಲೂ ವಿಶ್ವಕಪ್ ಟ್ರೋಫಿಗಾಗಿ ಕಾಯುತ್ತಿದ್ದೆ ಎಂದು ಅವರು ತಮ್ಮ ಶೀರ್ಷಿಕೆಯಲ್ಲಿ ಉಲ್ಲೇಖಿಸಿದ್ದಾರೆ. ಸರಿಸುಮಾರು 6084 ದಿನಗಳ ಕಾಯುವಿಕೆಯ ನಂತರ, ಅವರು ನವೆಂಬರ್ 2, 2025 ರಂದು ತಮ್ಮ ಕನಸಿನ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಈ ಗೆಲುವಿನೊಂದಿಗೆ ಹರ್ಮನ್‌ಪ್ರೀತ್, ಐಸಿಸಿ ಟ್ರೋಫಿಯನ್ನು ಗೆದ್ದ ಮೊದಲ ಭಾರತೀಯ ಮಹಿಳಾ ನಾಯಕಿ ಎಂಬ ಮಹತ್ವದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

error: Content is protected !!