April 4, 2026
Saturday, April 4, 2026
spot_img

ಗೆದ್ದರೂ ಖುಷಿಪಡುವ ಪರಿಸ್ಥಿತಿಯಲ್ಲಿಲ್ಲ ಕ್ಯಾಪ್ಟನ್: ಬ್ಯಾನ್ ಆಗೋ ಭೀತಿಯಲ್ಲಿ ಶ್ರೇಯಸ್ ಅಯ್ಯರ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೆಪಾಕ್ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಐದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿ ಪಂಜಾಬ್ ಕಿಂಗ್ಸ್ ಸತತ ಎರಡನೇ ಜಯ ದಾಖಲಿಸಿದ ಬೆನ್ನಲ್ಲೇ ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ ನಾಯಕ ಶ್ರೇಯಸ್ ಅಯ್ಯರ್ ಹಾಗೂ ತಂಡದ ಇತರ ಆಟಗಾರರಿಗೆ ಭಾರೀ ದಂಡ ವಿಧಿಸಿದೆ.

ಪಂಜಾಬ್ ಕಿಂಗ್ಸ್ ಈ ಸೀಸನ್‌ನಲ್ಲಿ ಎರಡನೇ ಬಾರಿಗೆ ನಿಧಾನಗತಿಯ ಬೌಲಿಂಗ್ ನಡೆಸಿದ ಕಾರಣ, ಶ್ರೇಯಸ್ ಅಯ್ಯರ್‌ಗೆ ₹24 ಲಕ್ಷ ದಂಡ ವಿಧಿಸಲಾಗಿದೆ. ಇದೇ ತಪ್ಪಿಗೆ ಗುಜರಾತ್ ವಿರುದ್ಧದ ಪಂದ್ಯದಲ್ಲೂ ಮೊದಲ ಬಾರಿ ₹12 ಲಕ್ಷ ದಂಡ ವಿಧಿಸಲಾಗಿತ್ತು. ಇದೀಗ ಎರಡನೇ ತಪ್ಪು ಮರುಕಳಿಸಿರುವುದರಿಂದ ದಂಡದ ಮೊತ್ತ ದ್ವಿಗುಣವಾಗಿದೆ.

ಇದಷ್ಟೇ ಅಲ್ಲದೆ, ಪ್ಲೇಯಿಂಗ್ ಇಲೆವನ್‌ನ ಉಳಿದ ಸದಸ್ಯರು ಮತ್ತು ಇಂಪ್ಯಾಕ್ಟ್ ಪ್ಲೇಯರ್‌ಗೂ ₹6 ಲಕ್ಷ ಅಥವಾ ಪಂದ್ಯದ ಶುಲ್ಕದ 25% (ಯಾವುದು ಕಡಿಮೆ ಆಗುತ್ತದೆಯೋ ಅದು) ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ:

ಐಪಿಎಲ್ ನಿಯಮಾವಳಿಯ ಪ್ರಕಾರ, ಒಂದು ತಂಡ ಮೂರನೇ ಬಾರಿ ಇದೇ ತಪ್ಪು ಮಾಡಿದರೆ ನಾಯಕನಿಗೆ ₹30 ಲಕ್ಷ ದಂಡದ ಜೊತೆಗೆ ಒಂದು ಪಂದ್ಯದ ನಿಷೇಧ ಕೂಡ ಎದುರಾಗುತ್ತದೆ. ಹೀಗಾಗಿ ಶ್ರೇಯಸ್ ಅಯ್ಯರ್ ಇದೀಗ ಬ್ಯಾನ್ ಭೀತಿಯಲ್ಲಿ ಇದ್ದಾರೆ. ಮುಂದಿನ ಪಂದ್ಯದಲ್ಲೂ ಪಂಜಾಬ್ ನಿಧಾನ ಓವರ್ ರೇಟ್ ಕಾಯ್ದುಕೊಂಡರೆ, ಅವರು ಒಂದು ಪಂದ್ಯದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಉಂಟಾಗಬಹುದು.

ಸದ್ಯ ಪಂಜಾಬ್ ಕಿಂಗ್ಸ್ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಟ್ರೋಫಿ ಕನಸಿಗೆ ಭರ್ಜರಿ ಆರಂಭ ನೀಡಿದೆ. ಆದರೆ ಮುಂದಿನ ಪಂದ್ಯಗಳಲ್ಲಿ ಓವರ್ ರೇಟ್ ವಿಚಾರದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !