ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ-ಎನ್‌ಸಿಆರ್ ಪ್ರದೇಶದ ಎಲ್ಲಾ ನಾಗರಿಕ ಸಂಸ್ಥೆಗಳು 8 ವಾರಗಳೊಳಗೆ ಪ್ರತಿಯೊಂದು ಬೀದಿ ನಾಯಿಯನ್ನು ಒಟ್ಟುಗೂಡಿಸಿ, ಗೊತ್ತುಪಡಿಸಿದ ನಾಯಿಗಳ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪನ್ನು ನೀಡಿದೆ.
ದೆಹಲಿಯಲ್ಲಿ ನಾಯಿ ಕಡಿತದಿಂದ ರೇಬೀಸ್‌ಗೆ ಬಲಿಯಾದ 6 ವರ್ಷದ ಬಾಲಕಿ ಚಾವಿ ಶರ್ಮಾ ಸಾವನ್ನಪ್ಪಿದ ದುರಂತ ಘಟನೆಯ ಬಳಿಕ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಈ ಪ್ರಕರಣದ ವಿಚಾರಣೆ ನಡೆಸಿ ಈ ನಿರ್ಧಾರ ತೆಗೆದುಕೊಂಡಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು, ಬೀದಿ ನಾಯಿ ದಾಳಿಯ ಹೆಚ್ಚುತ್ತಿರುವ ಬೆದರಿಕೆಯನ್ನು ಕಠಿಣ ಪರಿಸ್ಥಿತಿ ಎಂದು ಟೀಕಿಸಿತು. ಈ ಕ್ರಮವು ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಂಡಿದ್ದಾಗಿದೆ ಎಂದು ಒತ್ತಿ ಹೇಳಿದೆ.
ನಾವು ಇದನ್ನು ನಮಗಾಗಿ ಮಾಡುತ್ತಿಲ್ಲ. ಯಾರದೂ ಯಾವುದೇ ಭಾವನೆಗಳು ಮಧ್ಯಪ್ರವೇಶಿಸಬಾರದು . ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಯಾವುದೇ ಆಕ್ಷೇಪಣೆಗಳನ್ನು ತೆಗೆದುಕೊಳ್ಳಬಾರದು. ಈ ಪ್ರಕ್ರಿಯೆಗೆ ಅಡ್ಡಿಪಡಿಸುವವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ದೆಹಲಿ, ನೊಯ್ಡಾ, ಗಾಜಿಯಾಬಾದ್, ಗುರುಗ್ರಾಮ ಮತ್ತು ಫರಿದಾಬಾದ್‌ನಲ್ಲಿರುವ ನಾಗರಿಕ ಸಂಸ್ಥೆಗಳು ಕ್ರಿಮಿನಾಶಕ, ರೋಗನಿರೋಧಕ ಮತ್ತು ದೀರ್ಘಕಾಲೀನ ಆರೈಕೆಗಾಗಿ ವೃತ್ತಿಪರರನ್ನು ಹೊಂದಿರುವ ನಾಯಿ ಆಶ್ರಯಗಳ ನಿರ್ಮಾಣವನ್ನು ತಕ್ಷಣ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಒಮ್ಮೆ ಹಿಡಿದ ಒಂದೇ ಒಂದು ನಾಯಿಯನ್ನು ರಸ್ತೆಗೆ ಬಿಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯಾವುದೇ ಬೀದಿ ಪ್ರಾಣಿಗಳನ್ನು ತೆಗೆದುಹಾಕದಂತೆ ಅಥವಾ ತಪ್ಪಿಸಿಕೊಳ್ಳದಂತೆ ಖಚಿತಪಡಿಸಿಕೊಳ್ಳಲು ಎಲ್ಲಾ ಆಶ್ರಯಗಳನ್ನು ಸಿಸಿಟಿವಿ ಮೂಲಕ ಮೇಲ್ವಿಚಾರಣೆ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್‌ನ ಈ ಕ್ರಮವು ಸಂವಿಧಾನದ 32, 226 ಮತ್ತು 142ನೇ ವಿಧಿಗಳಿಂದ ಬಂದಿದೆ. ಇದು ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ.
ದೆಹಲಿಯ ಬೀದಿಗಳಲ್ಲಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಮಕ್ಕಳು ಬೆಲೆ ತೆರುತ್ತಿದ್ದಾರೆ ಎಂಬ ಜುಲೈ 28ರ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಹೇಳಿದೆ.