ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ರ‍್ಯಾಲಿ ವೇಳೆ ನಡೆದ ಭೀಕರ ಅಪಘಾತ ಪ್ರಕರಣ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈಎಸ್‌ಆರ್‌ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಕಾರು ಸಂಚರಿಸುತ್ತಿದ್ದ ವೇಳೆ ಸಂಭವಿಸಿದ ಈ ದುರಂತದಲ್ಲಿ ಸಿಂಗಯ್ಯ ಎಂಬ ಅಭಿಮಾನಿ ವ್ಯಕ್ತಿಯು ಮೃತಪಟ್ಟಿದ್ದು, ಈ ಘಟನೆಯ ಹಿನ್ನೆಲೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಅದನ್ನು ಆಧಾರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜಗನ್ ಮೋಹನ್ ರೆಡ್ಡಿ ಅವರ ಕಾರು ಚಾಲಕ ರಮಣ ರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನೆ ಮಾಡಲಾಗುತ್ತಿದ್ದು, ಆತನನ್ನು ಎ1 ಆರೋಪಿಯಾಗಿ, ಜಗನ್ ಅವರನ್ನು ಎ2 ಹಾಗೂ ಕಾರು ಮಾಲೀಕರನ್ನು ಎ3 ಎಂದು ಎಫ್‌ಐಆರ್‌ನಲ್ಲಿ ಪಟ್ಟಿ ಮಾಡಲಾಗಿದೆ.
ಪ್ರಾರಂಭದಲ್ಲಿ ಐಪಿಸಿ ಸೆಕ್ಷನ್ 304ಎ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೂ, ಇದೀಗ ಹೆಚ್ಚಿನ ಗಂಭೀರ ಆರೋಪಗಳಾದ 304 ಭಾಗ 2 ಮತ್ತು ಬಿಎನ್‌ಎಸ್ ಸೆಕ್ಷನ್ 105 ಅಡಿಯಲ್ಲಿ ಆರೋಪಗಳನ್ನು ಸೇರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಘಟನೆಯು ರಾಜಕೀಯ ತೀವ್ರತೆ ಪಡೆಯುತ್ತಿದ್ದಂತೆ, ಇಡೀ ಘಟನೆಯು ರಾಜಕೀಯ ಪ್ರೇರಿತವೇ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ವಿರೋಧಪಕ್ಷಗಳು ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ನ್ಯಾಯಸಮ್ಮತ ತನಿಖೆ ಮತ್ತು ಸಾರ್ವಜನಿಕ ಸತ್ಯ ಬಹಿರಂಗಗೊಳಿಸಲು ಒತ್ತಾಯಿಸುತ್ತಿವೆ. ಸದ್ಯ, ಜಗನ್ ಮೋಹನ್ ರೆಡ್ಡಿಗೆ ಈ ಘಟನೆ ತಲೆನೋವಾಗಿ ಪರಿಣಮಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.