April 17, 2026
Friday, April 17, 2026
spot_img

ಕಾರು-ಬಸ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಎಂಟು ಮಂದಿ ದುರ್ಮ*ರಣ

ಹೊಸದಿಗಂತ ರಾಯಚೂರು:

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಜನಪ್ರಿಯ ಮುಖಂಡ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಕೃಷ್ಣಾ ನಾಯಕ ಸೇರಿದಂತೆ ಅವರ ಕುಟುಂಬದ ಎಂಟು ಸದಸ್ಯರು ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಸಮೀಪ ಕಾರ್ ಮತ್ತು ಖಾಸಗಿ ಬಸ್ ನಡುವೆ ನಡೆದ ಈ ಮುಖಾಮುಖಿ ಡಿಕ್ಕಿ ಇಡೀ ತಾಲೂಕನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಅಮಾವಾಸ್ಯೆಯ ಪ್ರಯುಕ್ತ ಮೌನೇಶ್ವರ ದೇವರ ದರ್ಶನ ಪಡೆಯಲು ಕೃಷ್ಣಾ ನಾಯಕ (55) ಅವರು ತಮ್ಮ ಕುಟುಂಬದೊಂದಿಗೆ ಕಿಯಾ ಕಾರಿನಲ್ಲಿ ತೆರಳುತ್ತಿದ್ದರು. ಲಿಂಗಸುಗೂರಿನಿಂದ ಕಲಬುರ್ಗಿ ಕಡೆಗೆ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಮತ್ತು ಇವರ ಕಾರಿನ ನಡುವೆ ಶಾಂತಪುರ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರಿನ ಎಸಿ ಸಿಲಿಂಡರ್ ಸ್ಫೋಟಗೊಂಡು ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಇದರಿಂದಾಗಿ ಕಾರಿನಲ್ಲಿದ್ದ ಆರು ಜನರು ಜೀವಂತವಾಗಿ ದಹನಗೊಂಡಿದ್ದು, ಹೊರಬರಲು ಸಾಧ್ಯವಾಗದೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಹೃದಯವಿದ್ರಾವಕ ಘಟನೆಯಲ್ಲಿ ಕೃಷ್ಣಾ ನಾಯಕ, ಅವರ ಪತ್ನಿ ಅನಂತಕಲಾ (48), ಪುತ್ರಿ ನಿಸರ್ಗ (28), ಅಳಿಯ ಶರಣಬಸವ (38), ಅಣ್ಣನ ಮಗಳು ಶಶಿಕಲಾ (30) ಹಾಗೂ ಮೊಮ್ಮಕ್ಕಳಾದ ಚಂದನ (4), ಅದ್ವಿಕ್ (5) ಮತ್ತು ಸಿದ್ಧಾರ್ಥ (3) ಮೃತಪಟ್ಟಿದ್ದಾರೆ. ಮತ್ತಿಬ್ಬರು ಮೊಮ್ಮಕ್ಕಳಾದ ವಿರಾಟ್ ಮತ್ತು ಶ್ರೀನಿಧಿ ತೀವ್ರವಾಗಿ ಗಾಯಗೊಂಡಿದ್ದು, ಲಿಂಗಸುಗೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓರ್ವ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕೃಷ್ಣಾ ನಾಯಕ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಿರವಾರದಲ್ಲಿ ನೀರವ ಮೌನ ಆವರಿಸಿದೆ. ನೂರಾರು ಜನರು ಮೃತರ ಮನೆಗೆ ಧಾವಿಸಿ ಸಾಂತ್ವನ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಮಂತ್ರಾಲಯದ ಬಳಿ ನಡೆದ ಮತ್ತೊಂದು ಭೀಕರ ಅಪಘಾತದಲ್ಲಿ ಎಂಟು ಜನರು ಮೃತಪಟ್ಟ ಘಟನೆ ಹಸಿಯಾಗಿರುವಾಗಲೇ, ಈಗ ಮತ್ತೊಂದು ಕುಟುಂಬ ಸಂಪೂರ್ಣವಾಗಿ ನಾಶವಾಗಿರುವುದು ಜನತೆಯನ್ನು ಬೆಚ್ಚಿಬೀಳಿಸಿದೆ.

ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಈ ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದಾರೆ. “ಪ್ರಾಮಾಣಿಕ ಜನಸೇವಕರಾಗಿದ್ದ ಕೃಷ್ಣಾ ನಾಯಕ ಅವರು ಅಕಾಲಿಕವಾಗಿ ಕುಟುಂಬದೊಂದಿಗೆ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ಭಗವಂತ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ,” ಎಂದು ಅವರು ಶೋಕ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !