ಹೊಸದಿಗಂತ ವರದಿ, ಮಡಿಕೇರಿ:
ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ವರ್ಕ್’ಶಾಪ್ ಮಾಲಕ ಸಾವಿಗೀಡಾದ ಘಟನೆ ಗುರುವಾರ ತಡ ರಾತ್ರಿ ಗೋಣಿಕೊಪ್ಪದಲ್ಲಿ ನಡೆದಿದೆ.
ಗೋಣಿಕೊಪ್ಪ ಸಮೀಪದ ಕೈಕೇರಿ ನಿವಾಸಿ ಶಾಜಿ (51) ಮೃತ ದುರ್ದೈವಿಯಾಗಿದ್ದು, ಅವರ ಪತ್ನಿ ಹಾಗೂ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗುರುವಾರ ಕುಟುಂಬದವರೊಂದಿಗೆ ಮಾರುತಿ ವ್ಯಾಗನರ್ ಕಾರಿನಲ್ಲಿ ಮೈಸೂರಿಗೆ ತೆರಳಿದ್ದ ಶಾಜಿ ರಾತ್ರಿ ವಾಪಾಸಾಗುತ್ತಿದ್ದಾಗ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಮುಂಭಾಗ ಮುಖ್ಯರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾಗಿದೆ. ಈ ಸಂದರ್ಭ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಪತ್ನಿ ಹಾಗೂ ಮಗು ಗಾಯಗೊಂಡಿದ್ದಾರೆ. ರಾತ್ರಿ 11.30ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ನಿದ್ರೆ ಮಂಪರಿನಲ್ಲಿ ಈ ಘಟನೆ ನಡೆದಿರುವುದಾಗಿ ಹೇಳಲಾಗಿದೆ.
ಶಾಜಿ ಅವರು ಗೋಣಿಕೊಪ್ಪ -ಪೊನ್ನಂಪೇಟೆ ರಸ್ತೆಯಲ್ಲಿ ಲೇತ್ ವರ್ಕ್’ಶಾಪ್ ನಡೆಸುತ್ತಿದ್ದು, ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.