ಚಿಕ್ಕಬಳ್ಳಾಪುರದಲ್ಲಿ ಕಾರು ಚಾಲಕ ಆತ್ಮಹತ್ಯೆ: ಡೆತ್​ ನೋಟ್​​​​ನಲ್ಲಿ ತಮ್ಮ ಹೆಸರು ಕಂಡು ಸಂಸದ ಡಾ.ಕೆ.ಸುಧಾಕರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಂಸದ ಡಾ.ಕೆ.ಸುಧಾಕರ್ ಹೆಸರು ಉಲ್ಲೇಖಿಸಿ ಗುತ್ತಿಗೆ ನೌಕರ ಬಾಬು ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ.

ಇದೀಗ ಸುಧಾಕರ್ ಹೆಸರು ಕೇಳಿಬರತ್ತಿದ್ದಂತೆಯೇ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಇನ್ನು ಈ ಬಗ್ಗೆ ದೆಹಲಿಯಲ್ಲಿ ಸುಧಾಕರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬಾಬು ಎಂಬ ವ್ಯಕ್ತಿ ನನಗೆ ಗೊತ್ತಿಲ್ಲ, ಆತನ ಮುಖವನ್ನೇ ನೋಡಿಲ್ಲ. ಈ ವ್ಯಕ್ತಿ ಯಾಕೆ ನನ್ನ ಹೆಸರು ಉಲ್ಲೇಖ ಮಾಡಿದ್ದಾರೋ ಗೊತ್ತಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.

ಬಾಬು ಅನ್ನೋ ವ್ಯಕ್ತಿ ಚಿಕ್ಕಬಳ್ಳಾಪುರ ನಿವಾಸಿ ಅಂತ ಗೊತ್ತಾಗಿದೆ . ಆತ್ಮಹತ್ಯೆಗೆ ಶರಣಾಗಿರುವುದು ಜಿಲ್ಲಾ ಪಂಚಾಯತ್ ಆವರಣದಲ್ಲಿ . ಮೊದಲು ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತೇನೆ. ಮೊದಲನೆಯದಾಗಿ ನಂಗೆ ಈ ಸಾವು ದುಃಖ ತಂದಿದೆ. ನನ್ನ ಸಾರ್ವಜನಿಕ ಜೀವನದಲ್ಲಿ ಈ ಬಾಬು ಅನ್ನೋ ವ್ಯಕ್ತಿಯನ್ನ ಭೇಟಿ ಆಗಿಲ್ಲ . ನಾನು ಎರಡು ಬಾರಿ ಸಚಿವ ಆಗಿದ್ದೇನೆ, ಶಾಸಕ ಆಗಿದ್ದೇನೆ . ಈ ಸಮಯದಲ್ಲಿ ಹಲವರಿಗೆ ಕೆಲಸ ಕೊಡಿಸಿದ್ದೇನೆ, ಆದ್ರೆ ಈ ವ್ಯಕ್ತಿ ನಂಗೆ ಯಾರೂ ಅಂತ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಒಳಗೊಂಡಂತೆ ಯಾರೇ ತಪ್ಪಿತಸ್ಥರು ಇದ್ದರೂ ಅವರಿಗೆ ಉಗ್ರ ಶಿಕ್ಷೆಯಾಗಲಿ. ಕಾನೂನು ಏನೇ ಇರಲಿ ತನಿಖೆ ಪಾರದರ್ಶಕ ವಾಗಿರಲಿ. ಇದು ಮಾಧ್ಯಮದ ಟ್ರಯಲ್ ಆಗೋದು ಬೇಡ. ಸರಿಯಾಗಿ ತನಿಖೆ ಆಗಲಿ ಎಂದು ಒತ್ತಾಯಿಸಿದ್ದಾರೆ.

ಮೃತ ಕುಟುಂಬ ಸದಸ್ಯರನ್ನು ನಾನು ಭೇಟಿ ಮಾಡುತ್ತೇನೆ. ದೆಹಲಿಯಿಂದ ಹೋದ ಬಳಿಕ ಭೇಟಿ ಮಾಡಿ‌ ಸಾಂತ್ವನ ಹೇಳುತ್ತೇನೆ. ಇದರ ಹಿಂದೆ ರಾಜಕೀಯ ಪಿತೂರಿ ಇದೆ. ಇದು ಜಗತ್ ಜಾಹೀರಾಗಿದೆ. ಕಾಂಗ್ರೆಸ್ ಶಾಸಕರ ಹೆಸರು ಬಂದ್ರೆ ಒಂದು ಕಾನೂನು, ಬಿಜೆಪಿ ಶಾಸಕ, ಸಂಸದರು ಹೆಸರು ಬಂದ್ರೆ ಬೇರೆ ಕಾನೂನು. ಬಾಬು ಸಾವನ್ನು ರಾಜಕೀಯ ಕಾರಣಕ್ಕೆ ಎಳೆದು ತರುವುದು ಸರಿ ಅಲ್ಲ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!