ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರದಲ್ಲಿ ಕಾರು ಚಾಲಕ ಬಾಬು ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ನಡುವೆ ವಾಗ್ವಾದ ಹಾಗೂ ಪೋಸ್ಟರ್ ಯುದ್ಧ ಉಂಟಾಗಿದೆ. ಈ ಪ್ರಕರಣದಲ್ಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ. ಕೆ. ಸುಧಾಕರ್ ಅವರ ಕಾರ್ಯಕರ್ತರು ಪರಸ್ಪರ ದೂರು ಹಾಗೂ ಪ್ರತಿದೂರು ದಾಖಲಿಸಿರುವುದು ರಾಜಕೀಯ ವಾತಾವರಣವನ್ನು ಮತ್ತಷ್ಟು ಉದ್ವಿಘ್ನಗೊಳಿಸಿದೆ.
ಇತ್ತೀಚೆಗೆ ಸಂಸದ ಸುಧಾಕರ್ ಬೆಂಬಲಿಗ ಮುನಿರಾಜು, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗ ವಿನಯ್ ಬಂಗಾರಿ, ಹಮೀಮ್, ಸುಧಾಕರ್, ದೀಪು, ಸಲೀಂ ವಿರುದ್ಧ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ದೂರಿನನ್ವಯ, ಆರೋಪಿಗಳ ವಿರುದ್ಧ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಅದಕ್ಕೆ ಪ್ರತಿಯಾಗಿ, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗ ಹಮೀಮ್ ಎಂಬಾತ ಸಂಸದ ಸುಧಾಕರ್ ಬೆಂಬಲಿಗ ನಗರಸಭೆ ಅಧ್ಯಕ್ಷ ಗಜೇಂದ್ರ, ಅವರ ಸಹೋದರ ರವಿ ಹಾಗೂ ಅತ್ತಿಗೆ ಶೋಭಾ ಸೇರಿ ಮುನಿರಾಜು ವಿರುದ್ಧ ಹಲ್ಲೆ ಮತ್ತು ಪ್ರಾಣ ಬೆದರಿಕೆ ಹಾಕಿದ್ದಾರೆಂದು ದೂರು ನೀಡಿದ್ದಾರೆ.
ಈ ಪ್ರಕರಣದಲ್ಲಿ ಈಗಾಗಲೇ ಎರಡು ಕಡೆಗಳಿಂದಲೂ ದೂರುಗಳು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ರಾಜಕೀಯ ಅಸಮಾಧಾನ ಮತ್ತು ವೈಯಕ್ತಿಕ ದ್ವೇಷ ಈ ಪ್ರಕರಣದ ಹಿನ್ನಲೆಯಲ್ಲಿ ಮತ್ತಷ್ಟು ಗಾಢವಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ.