ಹೊಸದಿಗಂತ, ಆಲೂರು:
ರಾಷ್ಟ್ರೀಯ ಹೆದ್ದಾರಿಯ 75 ರ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಹೆದ್ದಾರಿಯಲ್ಲಿ ಯಾವುದೇ ಸೂಚನೆ ಫಲಕಗಳು ಇಲ್ಲದ ಕಾರಣ ಶುಕ್ರವಾರ ಅಪಘಾತ ಸಂಭವಿಸಿ ಮಗು ಮೃತಪಟ್ಟ ದುರ್ಘಟನೆ ನಡೆದಿದೆ.
ಧರ್ಮಸ್ಥಳ ಕುಕ್ಕೆಸುಬ್ರಹ್ಮಣ್ಯ ದೇವರ ದರ್ಶನ ಮುಗಿಸಿ ಕಾರಿನಲ್ಲಿ ಸ್ವಗ್ರಾಮ ಬೆಂಗಳೂರಿಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆಲೂರು ತಾಲೂಕಿನ ಮಾವನೂರು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅಪಘಾತ ಸಂಭವಿಸಿ ಕಾರು ಪಲ್ಟಿಯಾಗಿ ರಸ್ತೆಯ ಬಲಬದಿಗೆ ಹುರುಳಿ ಬಿದ್ದಿದೆ. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದರು. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಒಂದೇ ಕುಟುಂಬದ ಐವರಲ್ಲಿ ಓರ್ವಮಗು ಪರಮ ಚಕ್ರವರ್ತಿ( 2.5 ) ಚಿಕಿತ್ಸೆ ಫಲಕಾರಿಯಾಗದೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಸುಧಾಕರ, ಕುಮಾರಿ (55) ದೀಪಾ (30)
ಲವಿಕಾ (9) ಸಣ್ಣ ಪುಟ್ಟ ಗಾಯಗಳಾಗಿದ್ದು ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಪ್ರಕರಣ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.