ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಾದೇಶಿಕ ವಿಭಾಗದ ಮೂಡಿಗೆರೆ ವಲಯದ ಬಾಳೂರು ಮೀಸಲು ಅರಣ್ಯ ವ್ಯಾಪ್ತಿಯ ಎತ್ತಿನಭುಜ ದಟ್ಟಾರಣ್ಯ ರಸ್ತೆಯಲ್ಲಿ ಫೋರ್ ವೀಲ್ ಡ್ರೈವ್ ಮೋಟಾರು ರಾಲಿ ನಡೆಯುತ್ತಿದೆ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 80ಕ್ಕೂ ಹೆಚ್ಚು ಕಾರುಗಳು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ರೇಸಿಂಗ್ ನಲ್ಲಿ ಭಾಗವಹಿಸಿವೆ. ಅರಣ್ಯ ಇಲಾಖೆಯ ಅನುಮತಿ ಇಲ್ಲದೆ, ರಹಸ್ಯವಾಗಿ ಕಾರು ರ್ಯಾಲಿ ಆಯೋಜಿಸಿದ್ದು ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳಿಗೆ ಆಘಾತವಾಗಿದೆ.
ಬೆಂಗಳೂರು, ಹಾಸನ, ಸಕಲೇಶಪುರ, ತೀರ್ಥಹಳ್ಳಿ ಮತ್ತು ಶಿವಮೊಗ್ಗದಿಂದ 80 ಕಾರುಗಳು ಭಾಗವಹಿಸಿದ್ದವು. ಖಾಸಗಿ ಸಂಸ್ಥೆಗಳು ಆಫ್ ರೋಡಿಂಗ್ ಆಯೋಜಿಸಿದ್ದನ್ನು ವಿರೋಧಿಸಿ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಾಹನಗಳು ಖಾಸಗಿ ಜಮೀನುಗಳು, ಕಾಫಿ ಎಸ್ಟೇಟ್‌ಗಳು, ಬೈರಾಪುರ ಎಸ್ಟೇಟ್ ಗ್ರಾಮ ಮತ್ತು ಎತ್ತಿನ ಭುಜದ ಬಳಿಯ ಮೂಲಕ ಸಾಗಿವೆ ಎಂದು ಪ್ರಾಥಮಿಕ ಮಾಹಿತಿ ತೋರಿಸುತ್ತದೆ ಎಂದು ಚಿಕ್ಕಮಗಳೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಎನ್ ತಿಳಿಸಿದ್ದಾರೆ. ಈ ಕಾರು ರ್ಯಾಲಿ ಅರಣ್ಯ ಪ್ರದೇಶಗಳಲ್ಲಿ ಸಂಭವಿಸಿಲ್ಲ, ಆದಾಗ್ಯೂ, ಹಾನಿಗೊಳಗಾದ ಮರಗಳು, ಹುಲ್ಲುಗಾವಲುಗಳು ಮತ್ತು ಪ್ರಾಣಿಗಳಿಗೆ ತೊಂದರೆಯಾದ ಬಗ್ಗೆ ವಿವರವಾದ ವರದಿಯನ್ನು ಕೇಳಲಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.