Friday, December 19, 2025

ವೃತ್ತಿಜೀವನದ ಮಹತ್ವದ ತಿರುವು | ಸರ್ಫರಾಜ್ ಖಾನ್ ಕೈ ಹಿಡಿದ CSK

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಗಳಿಂದ ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಮಳೆ ಸುರಿಸಿದರೂ ಅಂತಾರಾಷ್ಟ್ರೀಯ ಅವಕಾಶ ಕೈ ತಪ್ಪಿದ್ದ ಸರ್ಫರಾಜ್ ಖಾನ್‌ಗೆ ಐಪಿಎಲ್ ಮಿನಿ ಹರಾಜು ಆರಂಭದಲ್ಲಿ ನಿರಾಸೆಯನ್ನೇ ತಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೈ ನೀಡಿದ್ದು, ಅವರ ಕ್ರಿಕೆಟ್ ಪಯಣಕ್ಕೆ ಹೊಸ ಉಸಿರು ತುಂಬಿದೆ. ಎರಡು ವರ್ಷಗಳ ಬಳಿಕ ಸರ್ಫರಾಜ್ ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಈ ಅವಕಾಶವನ್ನು ಅವರು ತಮ್ಮ ವೃತ್ತಿಜೀವನದ ಮಹತ್ವದ ತಿರುವು ಎಂದು ನೋಡುತ್ತಿದ್ದಾರೆ.

2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕೊನೆಯ ಬಾರಿ ಆಡಿದ್ದ ಸರ್ಫರಾಜ್, ಬಳಿಕ ಹರಾಜುಗಳಲ್ಲಿ ಕಡೆಗಣನೆಗೆ ಒಳಗಾಗಿದ್ದರು. ಈ ಬಾರಿ ಆರಂಭದಲ್ಲಿ ಹೆಸರು ಬಂದರೂ ಖರೀದಿ ಆಗದೆ ಹೋದದ್ದು ಅವರ ಅಭಿಮಾನಿಗಳಿಗೆ ನಿರಾಸೆ ತಂದಿತ್ತು. ಆದರೂ ಸಿಎಸ್‌ಕೆ ಕೊನೆಯ ಹಂತದಲ್ಲಿ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ತಂಡದ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬುವ ನಿರೀಕ್ಷೆ ಮೂಡಿಸಿದೆ. ಹರಾಜಿನ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಸರ್ಫರಾಜ್, “ನನ್ನ ಐಪಿಎಲ್ ಜೀವನಕ್ಕೆ ಮತ್ತೆ ಬೆಳಕು ನೀಡಿದ ಸಿಎಸ್‌ಕೆಗೂ ಹೃತ್ಪೂರ್ವಕ ಧನ್ಯವಾದ” ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನಲ್ಲಿ ಇದುವರೆಗೆ 50 ಪಂದ್ಯಗಳಲ್ಲಿ 585 ರನ್ ಗಳಿಸಿರುವ ಸರ್ಫರಾಜ್, ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಏಳು ಪಂದ್ಯಗಳಲ್ಲಿ ಶತಕ ಸೇರಿ ಮೂರು ಅರ್ಧಶತಕ ಬಾರಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿರುವುದು ಅವರ ಆಯ್ಕೆಗೂ ಬಲ ನೀಡಿದೆ. ಈಗ ಸಿಎಸ್‌ಕೆ ಪರ ಈ ಫಾರ್ಮ್ ಮುಂದುವರಿಸುವುದೇ ಸರ್ಫರಾಜ್ ಮುಂದಿರುವ ಸವಾಲಾಗಿದೆ.

error: Content is protected !!