ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಅಮೆರಿಕದ ಬೊಲಿವಿಯಾದ ರಾಜಧಾನಿ ಲಾ ಪಾಸ್ ಸಮೀಪ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಹಣ ಸಾಗಿಸುತ್ತಿದ್ದ ಸರಕು ವಿಮಾನ ಹೆದ್ದಾರಿಯ ಮೇಲೆ ಪತನಗೊಂಡ ಪರಿಣಾಮ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಅಪಘಾತದ ವೇಳೆ ರಸ್ತೆ ಮೇಲೆ ಸಂಚರಿಸುತ್ತಿದ್ದ ಹಲವಾರು ವಾಹನಗಳು ಹೊಡೆತಕ್ಕೊಳಗಾಗಿ ಭಾರೀ ಹಾನಿಗೀಡಾಗಿವೆ.
ಅಗ್ನಿಶಾಮಕ ದಳದ ಮುಖ್ಯಸ್ಥ ಪಾವೆಲ್ ಟೋವಾರ್ ಮಾಹಿತಿ ನೀಡಿದ್ದು, ಮೃತರು ವಿಮಾನದಲ್ಲಿದ್ದವರೋ ಅಥವಾ ಹೆದ್ದಾರಿಯ ವಾಹನಗಳಲ್ಲಿ ಇದ್ದವರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಹಲವರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆದಿದೆ. ಬೆಂಕಿಗಾಹುತಿಯಾದ ವಿಮಾನವನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದ್ದಾರೆ.
ಇದನ್ನೂ ಓದಿ:
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಚಿತ್ರಗಳಲ್ಲಿ, ಎಲ್ ಅಲ್ಟೊ ನಗರ ಸಮೀಪ ವಿಮಾನ ಹೊಲವೊಂದರಲ್ಲಿ ಬಿದ್ದಿರುವುದು ಕಂಡುಬಂದಿದೆ. ಅವಶೇಷಗಳು ಮತ್ತು ಹಾನಿಗೊಂಡ ಕಾರುಗಳು ರಸ್ತೆ ಮೇಲೆ ಚದರಿಕೊಂಡಿವೆ. ವಿಮಾನವು ಬೊಲಿವಿಯನ್ ವಾಯುಪಡೆಯ ಹೆರ್ಕ್ಯುಲೀಸ್ ಮಾದರಿಯದಾಗಿದ್ದು, ಕೇಂದ್ರ ಬ್ಯಾಂಕಿನಿಂದ ಹೊಸ ನೋಟುಗಳನ್ನು ಸಾಗಿಸುತ್ತಿತ್ತೆಂದು ತಿಳಿದುಬಂದಿದೆ.
ಅಪಘಾತ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ನೋಟುಗಳು ಚದುರಿಕೊಂಡಿದ್ದು, ಜನರು ಅವನ್ನು ಸಂಗ್ರಹಿಸಲು ಯತ್ನಿಸಿದ ದೃಶ್ಯಗಳು ವೈರಲ್ ಆಗಿವೆ. ಪೊಲೀಸರು ಗಲಭೆ ನಿಯಂತ್ರಣ ಕ್ರಮಗಳನ್ನು ಕೈಗೊಂಡಿದ್ದಾರೆ. ತನಿಖೆ ಮುಂದುವರಿದಿದೆ.



