ಹೊಸದಿಗಂತ ವರದಿ, ಮಂಗಳೂರು:
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸರಕು ಸಾಮಗ್ರಿಗಳನ್ನು ಹೇರಿಕೊಂಡು ಹೊರಟಿದ್ದ ಎಂಎಸ್‌ವಿ ಸಲಾಮತ್ ಹಡಗು ಮಂಗಳೂರಿನ ನೈರುತ್ಯಕ್ಕೆ ಸುಮಾರು 60 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಾಗುತ್ತಿರುವ ವೇಲೆ ಮುಳುಗಡೆಯಾಗಿದೆ. ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಕರವಾಳಿ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳನ್ನು ಹೇರಿಕೊಂಡು ಹೊರಟಿದ್ದ ಎಂಎಸ್‌ವಿ ಸಲಾಮತ್ ಹಡಗು ಮೇ 12 ರಂದು ಮಂಗಳೂರು ಬಂದರಿನಿಂದ ಲಕ್ಷದ್ವೀಪಕ್ಕೆ ಹೊರಟಿದ್ದು, ಮೇ 18 ಕ್ಕೆ ಲಕ್ಷದ್ವೀಪದ ಕಡ್ಮತ್ ದ್ವೀಪ ತಲುಪಬೇಕಿತ್ತು. ಹಡಗಿನಲ್ಲಿ 6 ಭಾರತೀಯ ಸಿಬ್ಬಂದಿ ಮತ್ತು ಮಿಶ್ರ ಸರಕು (ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳು ಇತ್ತು.
ಪ್ರವಾಹದ ಕಾರಣದಿಂದ ಹಡಗು ಮುಳುಗಿದ್ದು, ಹಡಗಿನ ಸಿಬ್ಬಂದಿಗಳು ಪ್ರಾಣರಕ್ಷಣೆಗಾಗಿ ಮುಳುಗುತ್ತಿರುವ ಹಡಗನ್ನು ತ್ಯಜಿಸಿ ತಮ್ಮಲ್ಲಿದ್ದ ಸಣ್ಣ ಡಿಂಗಿ ದೋಣಿಯನ್ನು ಹತ್ತಿದರು.
ಈ ಡೆಂಗಿ ಹಡಗಿನಲ್ಲಿದ್ದವರನ್ನು ಇನ್ನೊಂದು ವ್ಯಾಪಾರಿ ಹಡಗಿನಲ್ಲಿದ್ದವರು ಕಂಡು ಕರಾವಳಿ ಕಾವಲು ಪಡೆಗೆ ಮಾಹಿತಿ ಒದಗಿಸಿದ್ದರು. ಅದೇ ಸಮಯದಲ್ಲಿ ಗಸ್ತು ತಿರುಗುತ್ತಿದ್ದ ಐಸಿಜಿ ವಿಕ್ರಮ್ ಹಡಗು ಡಿಂಗಿ ದೋಣಿಯಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಿದ್ದು, ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ನೀಡಿದ್ದಲ್ಲದೆ, ಸಿಬ್ಬಂದಿಯನ್ನು ಸುರಕ್ಷಿತವಾಗಿ ಮೇ 15 ರಂದು ನವ ಮಂಗಳೂರು ಬಂದರಿಗೆ ಕರೆತಂದಿದ್ದಾರೆ.