ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಭಂದಿಸಿ ಸೋಮವಾರ ಪೇಜಾವರ ವಿಶ್ಚಪ್ರಸನ್ನತೀರ್ಥರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳಿಗೆ ಸಂಚು ನಡೆದಿದೆ ಎಂದು ಕುಕ್ಕರ್ ಬಾಂಬ್ ಸ್ಪೋಟದ ವೇಳೆ ಗೊತ್ತಾಗಿದೆ. ಕರಾವಳಿ ಭಾಗದ ಜನರು ಸದಾ ಜಾಗೃತರಾಗಿರಬೇಕು, ಸಂದೇಹಾಸ್ಪದ ಚಟುವಟಿಕೆ ಕಂಡ ಕೂಡಲೇ ಜಾಗೃತರಾಗಬೇಕು ಎಂದು ಕಿವಿಮಾತು ಹೇಳಿದರು.
ಉತ್ಥಾನ ದ್ವಾದಶಿ ಬಳಿಕ ಯಕ್ಷಗಾನ, ಕೋಲ, ಉತ್ಸವ, ಕಂಬಳ, ದೀಪೋತ್ಸವ, ನಾಗಮಂಡಲದಂತಹ ಹಲವಾರು ಉತ್ಸವ ನಡೆಯುತ್ತದೆ. ಜನಸಂದಣಿ ಹೆಚ್ಚಿರುವ ಸಮಾರಂಭಗಳು ನಡೆಯುವುದರಿಂದ ಅನಾಹುತ ನಡೆದಲ್ಲಿ ಸಮಾಜಕ್ಕೆ ದೊಡ್ಡ ಹಾನಿಯಾಗುವುದು ಎಂದು ಆತಂಕ ವ್ಯಕ್ತಪಡಿಸಿದರು. ಕರಾವಳಿಯಲ್ಲಿ ಮುಂದಿನ ದಿನಗಳಲ್ಲಿ ಉಗ್ರರು ಹಿಂದೂಗಳ ಸೋಗಿನಲ್ಲಿ ಬಂದು ದುಷ್ಕೃತ್ಯ ನಡೆಸುವ ಅಪಾಯವಿರುತ್ತದೆ ಎಂದು ಹೇಳಿದರು
ಹಿಂದೂ ಸಂಕೇತ ಬಳಸಿ ಇಂತಹ ಕೃತ್ಯ ಮಾಡುವುದು ನೋಡುತ್ತಿದ್ದೇವೆ. ಸಮಾಜದಲ್ಲಿ ದುಷ್ಕೃತ್ಯ ಎಸಗುವವರು ಹಿಂದೂ ಸಮಾಜದ ಮೇಲೆ ಹೇರುವ ನಿಟ್ಟಿನಲ್ಲಿ ಈ ಚಟುವಟಿಕೆ ನಡೆಸುತ್ತಿದ್ದಾರೆ, ಮೊಬೈಲ್ ಹಾಗೂ ದಾಖಲೆ ಕಳೆದುಹೋದರೆ ಸಂಬಂಧಪಟ್ಟ ಇಲಾಖೆಗೆ ತಿಳಿಸಿ, ಇಲ್ಲವಾದರೆ ಇಂತಹ ಸಂಧರ್ಭದಲ್ಲಿ ಸಂದೇಹಕ್ಕೆ ಒಳಗಾಗಬೇಕಾಗುತ್ತದೆ ಎಂದರು.