ಹೊಸದಿಗಂತ ವರದಿ,ಉಡುಪಿ:
ಮಾರಕಾಸ್ತ್ರವನ್ನು ಸ್ಕಾರ್ಪಿಯೋ ಕಾರಿನಲ್ಲಿ ಇಟ್ಟುಕೊಂಡು ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಆರು ಜನರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.
ಮೂಲ್ಕಿಯ ಅಮಿತ್ ರಾಜ್, ಸುರತ್ಕಲ್ ನ ಪ್ರಕಾಶ್, ನೀರ್ ಮಾರ್ಗದ ಕಾರ್ತಿಕ್, ಕೈಕಂಬದ ಅಭಿಷೇಕ್, ಫರಂಗಿಪೇಟೆಯ ಶ್ರೀಕಾಂತ್ ಬಂಧಿತ ಆರೋಪಿಗಳು.
ಕಾಪು ವೃತ್ತನಿರೀಕ್ಷಕಿ ಜಯಶ್ರೀಯವರು ಉದ್ಯಾವರ ಸೇತುವೆ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅನುಮಾನದ ಮೇರೆಗೆ ಸ್ಕಾರ್ಪಿಯೋ ಕಾರನ್ನು ನಿಲ್ಲಿಸಲು ಸೂಚಿಸಿದರೂ, ಕಾರನ್ನು ನಿಲ್ಲಿಸದೇ ಚಾಲಕನು ಅತೀ ವೇಗವಾಗಿ ಚಲಾಯಿಸಿದ್ದಾನೆ.
ವೃತ್ತನಿರೀಕ್ಷಕಿ ಕಾಪು ಪಿಎಸ್ಐ ಖಾದರ್ ಅವರಿಗೆ ಮಾಹಿತಿ ನೀಡಿ, ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾಪುವಿನ ಕೋತಲಕಟ್ಟೆ ಸ್ಕಾರ್ಪಿಯೋ ಕಾರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ.
ಈ ವೇಳೆ ಮಾರಕಾಸ್ತ್ರಗಳಾದ ಡ್ರಾಗರ್, ಚೂರಿ, ಕಬ್ಬಿಣದ ರಾಡ್ ಹಾಗು ಮರಳು ಮಿಶ್ರಿತ ಖಾರದ ಪುಡಿ ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಆರೋಪಿಗಳೆಲ್ಲರೂ ವಿವಿಧ ಠಾಣೆಯಲ್ಲಿ ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಕಾಪು ಠಾಣಾಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.