ನಟ ರವಿ ಮೋಹನ್ ವಿರುದ್ಧ ಪ್ರಕರಣ: 9 ಕೋಟಿ ಮೌಲ್ಯದ ಮೊಕದ್ದಮೆ ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರವಿ ಮೋಹನ್ ತಮ್ಮ ಮುಂದಿನ ಸಿನಿಮಾ ಯೋಜನೆಗಳಲ್ಲಿ ಬ್ಯುಸಿಯಾಗಿರುವಾಗಲೇ ಕಾನೂನು ತೊಂದರೆ ಎದುರಿಸುತ್ತಿದ್ದಾರೆ. ತಮಿಳು ಚಿತ್ರರಂಗದ “ಬಾಬಿ ಟಚ್ ಗೋಲ್ಡ್ ಯೂನಿವರ್ಸಲ್” ಎಂಬ ನಿರ್ಮಾಣ ಸಂಸ್ಥೆ, ನಟನ ವಿರುದ್ಧ 6 ಕೋಟಿ ಮುಂಗಡ ಹಣ ಪಡೆದ ನಂತರ ಸಹಕರಿಸದೆ ವಂಚನೆ ಮಾಡಿದ್ದಾರೆಂದು ಆರೋಪಿಸಿ ಮದ್ರಾಸ್ ಹೈಕೋರ್ಟ್‌ಗೆ ಮೊರೆಹೋಗಿತ್ತು. ಈ ಬೆನ್ನಲ್ಲೇ, ನಟ ರವಿ ಮೋಹನ್ ತಮ್ಮದಾಗಿ ನಿರ್ಮಾಣ ಸಂಸ್ಥೆ ಆರಂಭಿಸಿರುವುದೂ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

2019ರಲ್ಲಿ ನಿಗದಿಯಾದ ಸಿನಿಮಾ ಒಪ್ಪಂದದ ಪ್ರಕಾರ, ನಟನಿಗೆ 15 ಕೋಟಿ ಸಂಭಾವನೆ ನಿಗದಿಯಾಗಿತ್ತು. ಈ ಪೈಕಿ 6 ಕೋಟಿ ಮೊತ್ತವನ್ನು ನಿರ್ಮಾಪಕರು ಮುಂಗಡವಾಗಿ ಪಾವತಿಸಿದ್ದರು. ಆದರೆ, ನಟ ಚಿತ್ರೀಕರಣ ಆರಂಭಿಸದೆ ಪ್ರಾಜೆಕ್ಟ್‌ನಲ್ಲಿ ಭಾಗವಹಿಸದೇ ಇದ್ದದ್ದು ಮತ್ತು ಹಣವನ್ನು ಹಿಂದಿರುಗಿಸದಿದ್ದದ್ದು ನಿರ್ಮಾಪಕರ ಆಕ್ರೋಶಕ್ಕೆ ಕಾರಣವಾಯಿತು. ಇವುಗಳ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಆರೋಪಕ್ಕೆ ಪ್ರತಿಯಾಗಿ ನಟ ರವಿ ಮೋಹನ್, ನಿರ್ಮಾಪಕರ ವಿಳಂಬವೇ ಯೋಜನೆ ವಿಫಲವಾಗಲು ಕಾರಣ ಎಂದು ಪ್ರತಿದಾವೆ ಹೂಡಿದರು. ಅವರು 9 ಕೋಟಿ ನಷ್ಟ ಪರಿಹಾರ ಕೋರಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರು. ಆದರೆ, ನ್ಯಾಯಾಲಯ ಈ ಪ್ರತಿದಾವೆಯನ್ನು ತಿರಸ್ಕರಿಸಿದ್ದು, ನಟನಿಗೆ ನೀಡಿದ್ದ 6 ಕೋಟಿ ಮೊತ್ತವನ್ನು ವಾಪಸ್‌ ನೀಡಲು ನಿರ್ದೇಶಿಸಿದೆ. ಜೊತೆಗೆ 5.9 ಕೋಟಿ ಮೌಲ್ಯದ ಆಸ್ತಿ ದಾಖಲೆಗಳನ್ನು ನಾಲ್ಕು ವಾರಗಳೊಳಗೆ ಸಲ್ಲಿಸಲು ಆದೇಶಿಸಲಾಗಿದೆ.

ರವಿ ಮೋಹನ್ ಇತ್ತೀಚೆಗೆ ಕಾದಲಿಕಾ ನೆರಮಿಲೈ ಚಿತ್ರದಲ್ಲಿ ನಟಿಸಿದ್ದರು. ಮುಂದಿನ ದಿನಗಳಲ್ಲಿ ಅವರು ಕರತೇ ಬಾಬು, ಪರಾಶಕ್ತಿ, ಜಿನೀ ಮತ್ತು ಥಾನಿ ಒರುವನ್ 2 ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!