ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮಿ ಅವರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿಯನ್ನು ಬಂಧಿಸಿದ್ದು, ಚಾರ್ಜ್ ಶೀಟ್ ಸಲ್ಲಿಕೆಗೆ ಸಜ್ಜಾಗುತ್ತಿದ್ದಾರೆ.
ವಿಜಯಲಕ್ಷ್ಮಿ ಅವರು ಡಿಸೆಂಬರ್ ತಿಂಗಳಲ್ಲಿ ತಮ್ಮ ಬಗ್ಗೆ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿರುವ, ಅಶ್ಲೀಲ ಸಂದೇಶಗಳನ್ನು ಕಳಿಸುತ್ತಿರುವವರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಈ ಮೊದಲು ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ.
ದಾವಣಗೆರೆಯ ಇಂಜಿನಿಯರ್ ನಿತಿನ್, ಚಿಕ್ಕಬಾಣಾವರದ ಆಟೋ ಡ್ರೈವರ್ ಚಂದ್ರು, ಹುಬ್ಬಳ್ಳಿ ಪೆಟ್ರೋಲ್ ಬಂಕ್ ಮ್ಯಾನೇಜರ್ ನಾಗರಾಜ್ ತಳವಾರ್, ಧಾರವಾಡದ ಆಡಿಟರ್ ಪ್ರಶಾಂತ್ ತಳವಾರ್ ಬಂಧಿತರಾಗಿದ್ದರು. ಇವರ ಜೊತೆಗೆ ಇನ್ನೂ ಮೂರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಟೆಕ್ನಿಕಲ್ ಸಾಕ್ಷ್ಯವನ್ನು ಸಂಗ್ರಹಿಸುತ್ತಿದ್ದಾರೆ. ಕೆಲವರನ್ನು ಜನವರಿ 7ನೇ ತಾರೀಖು ಹಾಗೂ ಅದಕ್ಕೆ ಮುಂಚೆಯೇ ಪೊಲೀಸರು ಬಂಧಿಸಿದ್ದರು. ಕೆಲವು ಆರೋಪಿಗಳು ಪರಾರಿ ಆಗಿದ್ದರು. ಇದೀಗ ಒಟ್ಟು ಎಂಟು ಮಂದಿಯನ್ನು ಬಂಧಿಸಿದ್ದು, ಸಾಕ್ಷ್ಯಗಳ ಪರಿಶೀಲನೆ ಬಳಿಕ ಎಲ್ಲರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ವಿಜಯಲಕ್ಷ್ಮಿ ಅವರಿಗೆ ಮುಂಚೆ ನಟಿ ರಮ್ಯಾ ಅವರು ತಮಗೆ ಅಶ್ಲೀಲ ಕಮೆಂಟ್ಗಳನ್ನು ಮಾಡಿದ್ದ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು. ಪೊಲೀಸರು ಹಲವು ಆರೋಪಿಗಳನ್ನು ಬಂಧಿಸಿ ಕ್ರಮ ಜರುಗಿಸಿದ್ದರು. ಅದರ ಬಳಿಕ ವಿಜಯಲಕ್ಷ್ಮಿ ಅವರು ಸುದೀಪ್ ಅಭಿಮಾನಿಗಳ ವಿರುದ್ಧ ದೂರು ನೀಡಿದ್ದರು.


