Tuesday, December 2, 2025

ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆ ಕೇಸ್: ಮಾಲೀಕ, ಮ್ಯಾನೇಜರ್‌ ವಿರುದ್ಧ ಎಫ್‌ಐಆರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಂಪೇಗೌಡ ಏರ್‌ಪೋರ್ಟ್‌ನ ರಾಮೇಶ್ವರಂ ಕೆಫೆ ಊಟದಲ್ಲಿ ಹುಳ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಮಾಲೀಕ ಹಾಗೂ ಮ್ಯಾನೇಜರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಪ್ರಕರಣದಿಂದ ತಪ್ಪಿಕೊಳ್ಳಲು ಯತ್ನಿಸಿದ್ದ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್ ಹಾಗೂ ಮ್ಯಾನೇಜರ್ ಸುಮಂತ್ ವಿರುದ್ಧ ಸುಳ್ಳು ದೂರು ನೀಡಿ, ಮಾನಹಾನಿ ಮಾಡಿದ ಆರೋಪದಡಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಈ ಕುರಿತು ಯುವಕರು ವಿಡಿಯೋ ಮಾಡಿದ್ದರು. ಇದೇ ಸಮಯಕ್ಕೆ ಕೆಫೆಗೆ ಹಣಕ್ಕೆ ಬೇಡಿಕೆಯಿಟ್ಟಿದ್ದ ಕರೆಯೊಂದು ಬಂದಿತ್ತು. ವಿಡಿಯೋ ಮಾಡಿದ್ದ ಯುವಕರೇ ಕರೆ ಮಾಡಿ, ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂದು ಆರೋಪಿಸಿ ಕೆಫೆ ಮಾಲೀಕರು ದೂರು ನೀಡಿದ್ದರು. ಆದರೆ ವಿಡಿಯೋ ಇಟ್ಟುಕೊಂಡು ಇನ್ನೋರ್ವ ಬ್ಲ್ಯಾಕ್‌ಮೇಲ್ ಮಾಡಿದ್ದ. ಬಳಿಕ ಈ ಪ್ರಕರಣ ವೈಯಾಲಿಕಾವಲ್ ಠಾಣೆಗೆ ಟ್ರಾನ್ಸ್ಫರ್ ಆಗಿತ್ತು.

ತನಿಖೆ ವೇಳೆ, ವಿಡಿಯೋ ಮಾಡಿದ್ದ ಯುವಕರು ಬ್ಲ್ಯಾಕ್‌ಮೇಲ್ ಮಾಡಿಲ್ಲ ಎಂಬುದು ಸಾಬೀತಾಗಿದೆ. ಈ ಹಿನ್ನೆಲೆ ವಿಡಿಯೋ ಮಾಡಿದ್ದ ಯುವಕ, ತನ್ನ ಮೇಲೆ ಸುಳ್ಳು ಆಪಾದನೆ ಮಾಡಿದ್ದಾರೆಂದು ಏರ್‌ಪೋರ್ಟ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್‌ಐಆರ್ ದಾಖಲಾಗಿದೆ.

error: Content is protected !!