ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ನಿಂದನೆ ಪ್ರಕರದಲ್ಲಿ ಆರೋಪ ಎದುರಿಸುತ್ತಿದ್ದ ಯಕ್ಷಗಾನ ಕಲಾವಿದರಿಬ್ಬರನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಎರಡನೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಏನಿದು ಪ್ರಕರಣ?
ಕರ್ನಾಟಕ ಮೇಳದ ಪ್ರಸಿದ್ದ ಬ್ರಹ್ಮ ಬಲಾಂಡಿ ಎನ್ನುವ ಪ್ರಸಂಗವನ್ನು ಯಕ್ಷ ಕಲಾವಿದ ಸಂಘಟಕ ಪೂರ್ಣೇಶ್ ಎಂಬವರು ಮಂಗಳೂರು ನಗರದ ಪುರಭವನದಲ್ಲಿ ಸಂಯೋಜಿಸಿದ್ದರು. ಆ ಪ್ರಸಂಗದಲ್ಲಿ ಅದರ ರಚನೆಕಾರ ಅನಂತರಾಮ ಬಂಗಾಡಿಯವರು ಸೃಷ್ಟಿಸಿದ ಪಾತ್ರಗಳ ಹೆಸರನ್ನು ಯಥಾವತ್ತಾಗಿ ಕರಪತ್ರಗಳಲ್ಲಿ ಮುದ್ರಿಸಿ ಹಂಚಲಾಗಿತ್ತು. ಆ ಪಾತ್ರಗಳ ಹೆಸರಿನ ಉಲ್ಲೇಖ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯಿದೆಯ ಅಡಿಯಲ್ಲಿ ಜಾತಿ ನಿಂದನೆ ಎಂದು ದಲಿತ ಸಂಘಟನೆ ಮುಖಂಡರು ಪೋಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಪೋಲೀಸರು ಪೂರ್ಣೇಶ್ ಮತ್ತು ಮಿಜಾರು ತಿಮ್ಮಪ್ಪ ಎಂಬ ಇಬ್ಬರು ಕಲಾವಿದರ ಮೇಲೆ ಜಾತಿನಿಂದನೆ ಕೇಸು ದಾಖಲಿಸಿ ಎರಡನೆ ಹೆಚ್ಚುವರಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಹಲವಾರು ಸಾಕ್ಷಿಗಳನ್ನು ದೂರುದಾರರು ಹಾಜರುಪಡಿಸಿದ್ದರು.
ಆ ನಂತರ ಸಂಘಟಕರು ಸದ್ರಿ ಯಕ್ಷಗಾನವನ್ನು ರದ್ದುಪಡಿಸಿ ಬೇರೆ ಪ್ರಸಂಗವನ್ನು ಆಯೋಜಿಸಿದ್ದರು. ಪ್ರಕರಣದ ಸಮಗ್ರ ತನಿಖೆ ನಡೆದು ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿಗಳನ್ನು ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಆರೋಪಿಗಳ ಪರವಾಗಿ ವಕೀಲ ಶಶಿರಾಜ್ ರಾವ್ ಕಾವೂರು ವಾದಿಸಿದ್ದರು.



