ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಜಾತಿಯ ಉಲ್ಲೇಖವನ್ನು ಪೊಲೀಸ್ ದಾಖಲೆಗಳು , ಸರ್ಕಾರಿ ಫಾರ್ಮ್‌ಗಳು, ವಾಹನಗಳು ಮತ್ತು ಸಾರ್ವಜನಿಕ ಸ್ಥಳಗಳಿಂದ ತೆಗೆದುಹಾಕಲು ಆದೇಶವನ್ನು ಹೊರಡಿಸಿದೆ.
ಜಾತಿಯ ಉಲ್ಲೇಖ, ರಾಷ್ಟ್ರ ವಿರೋಧಿ ಮತ್ತು ಸಾಂವಿಧಾನಿಕ, ನೈತಿಕತೆಗೆ ವಿರುದ್ಧ ಎಂದು ವಿವರಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪಿನ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯ ಕಾರ್ಯದರ್ಶಿ ದೀಪಕ್ ಕುಮಾರ್ ಅವರ ಆದೇಶದಂತೆ, ಎಫ್‌ಐಆರ್, ಬಂಧನ ಮೆಮೊ, ಇತರ ಪೊಲೀಸ್ ದಾಖಲೆಗಳಲ್ಲಿ ಇನ್ನು ಮುಂದೆ ಜಾತಿಯನ್ನು ಉಲ್ಲೇಖಿಸದೆ, ಗುರುತಿಗಾಗಿ ಪೋಷಕರ ಹೆಸರನ್ನು ಬಳಸಲಾಗುವುದು. ಪೊಲೀಸ್ ಠಾಣೆಯ ನೋಟಿಸ್ ಬೋರ್ಡ್‌ಗಳು, ವಾಹನಗಳು ಮತ್ತು ಫಲಕಗಳಿಂದ ಜಾತಿ ಸಂಕೇತಗಳು, ಘೋಷಣೆಗಳನ್ನು ತಕ್ಷಣ ತೆಗೆಯಲು ಸೂಚನೆ ನೀಡಲಾಗಿದೆ. ಜಾತಿ ಆಧಾರಿತ ರ‍್ಯಾಲಿಗಳನ್ನು ನಿಷೇಧಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ಉಲ್ಲಂಘನೆಯನ್ನು ಗಮನಿಸಲು ಪೊಲೀಸರಿಗೆ ಆದೇಶಿಸಲಾಗಿದೆ.
ವಿನಾಯಿತಿ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಮಾತ್ರ ಜಾತಿಯ ಉಲ್ಲೇಖ ಕಾನೂನು ಅಗತ್ಯವಾಗಿರುವುದರಿಂದ ವಿನಾಯಿತಿ ನೀಡಲಾಗಿದೆ. ಪೊಲೀಸ್ ಮಾರ್ಗಸೂಚಿಗಳು ಮತ್ತು ಕೈಪಿಡಿಗಳಲ್ಲಿ ತಿದ್ದುಪಡಿಗಳನ್ನು ಮಾಡಲಾಗುವುದು.
ಆದೇಶದಲ್ಲಿ ಏನಿದೆ?
CCTNSನಿಂದ ಜಾತಿ ತೆಗೆದುಹಾಕುವಿಕೆ: ಕ್ರೈಂ ಆಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್‌ನಿಂದ ‘ಜಾತಿ’ ಕಾಲಂ ತೆಗೆಯಲಾಗುವುದು.
ತಾಯಿಯ ಹೆಸರು ದಾಖಲು: ಗುರುತಿಗಾಗಿ ತಂದೆ,ಗಂಡನ ಜೊತೆಗೆ ತಾಯಿಯ ಹೆಸರನ್ನು ದಾಖಲಿಸಲಾಗುವುದು.
ಜಾತಿ ಕಾಲಂ ಖಾಲಿ ಬಿಡುವುದು: ತಾಂತ್ರಿಕ ಬದಲಾವಣೆಯವರೆಗೆ ಜಾತಿ ಕಾಲಂ ಅನಿವಾರ್ಯವಲ್ಲ, ಖಾಲಿ ಬಿಡಬೇಕು.
ವಾಹನಗಳಿಂದ ಜಾತಿ ಗುರುತು ತೆಗೆಯುವಿಕೆ: ಜಾತಿಯನ್ನು ಸೂಚಿಸುವ ಸ್ಟಿಕರ್‌ಗಳಿಗೆ ಮೋಟಾರು ವಾಹನ ಕಾಯ್ದೆಯಡಿ ಶಿಕ್ಷೆ.
ಜಾತಿ ರ‍್ಯಾಲಿಗಳ ನಿಷೇಧ: ಜಾತಿ ಆಧಾರಿತ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ.