ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಯಲ್ಲಿ ಜಾತಿ ಗಣತಿ ಮಾಡಲಾಗಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳು ಆಗಿನ ಹಿಂದುಳಿದ ಆಯೋಗದ ಅಧ್ಯಕ್ಷ ಕಾಂತರಾಜು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು, ಜಾತಿಗಣತಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಬಳಿಕ ಕಾಂತರಾಜು ಸಹಿ ಹಾಕದೆ ಓಡಿದ್ದಾರೆ. ಈ ವರದಿಯಲ್ಲಿ ರಹಸ್ಯವೇನೂ ಇಲ್ಲ, ಎಲ್ಲಾ ಜಗಜ್ಜಾಹೀರಾಗಿದೆ.
ಜಾತಿ, ಜಾತಿಗಳನ್ನು, ಧರ್ಮ ಧರ್ಮಗಳನ್ನು ಒಡೆಯುವ ವರದಿ. ಜನರನ್ನು ಕೂಡಿಸೋದು ಕಷ್ಟ, ಒಡೆಯೋದು ಸುಲಭ. ಸಿದ್ದರಾಮಯ್ಯ ಒಡೆಯುವುದರಲ್ಲಿ ಎಕ್ಸ್‌ಪರ್ಟ್. ಜಾತಿ, ಧರ್ಮಗಳ ಮಧ್ಯೆ ಒಡಕು ತರುತ್ತಿದ್ದಾರೆ. ಇದು ಸಿದ್ದರಾಮಯ್ಯ ಪ್ರಾಯೋಜಕತ್ವದ ಅವೈಜ್ಞಾನಿಕ ವರದಿ ಎಂದು ವಾಗ್ದಾಳಿ ನಡೆಸಿದರು.
ಲಕ್ಷಾಂತರ, ಕೋಟ್ಯಂತರ ಮನೆಗಳಿಗೆ ಭೇಟಿ ಮಾಡದೇ ವರದಿ ಕೊಟ್ಟಿದ್ದಾರೆ. ಮನೆಗಳ ಸಮೀಕ್ಷೆ ಮಾಡದೇ ಹೇಗೆ ವರದಿ ಮಾಡಿದರು?. ವೀರಶೈವ ಲಿಂಗಾಯತರನ್ನು ಭಾಗ ಮಾಡಿದರು. ಮುಸ್ಲಿಮರನ್ನು ಫೋಕಸ್ ಮಾಡಲಾಗಿದೆ. ಇದರಿಂದ ಏನು ಸಂದೇಶ ಕೊಡುತ್ತಿದ್ದೀರಿ. ನೆಹರೂ ಅವರೂ ಇದೇ ತಪ್ಪು ಮಾಡಿದ್ದರು, ಅಂಬೇಡ್ಕರ್ ಸ್ಪರ್ಧಿಸಿದ್ದ ಕ್ಷೇತ್ರವನ್ನು ಪಾಕಿಸ್ತಾನಕ್ಕೆ ಸೇರಿಸಿದರು. ಲಿಂಗಾಯತರು, ಒಕ್ಕಲಿಗರನ್ನ ಮಾತ್ರ ವಿಭಜಿಸಿದ್ದೀರಿ. ನಿಮಗೆ ಬೇಕಿರುವ ಮುಸ್ಲಿಂ ಸಮುದಾಯವನ್ನು ವಿಭಜಿಸಲಿಲ್ಲ.
ಜಾತಿ ಜನಗಣತಿ ವರದಿಗೆ 150 ಕೋಟಿ ಖರ್ಚು ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ, ಇದೇ ಬೋಗಸ್. ಶಾಮನೂರು ಅವರೇ ನಮ್ಮನೆಗೆ ಬಂದು ಸಮೀಕ್ಷೆ ಮಾಡಿಲ್ಲ ಎಂದು ಹೇಳಿದ್ದರು. ಹಾಗಾದರೆ 150 ಕೋಟಿ ಹೊಡೆದವರು ಯಾರು?. 150 ಕೋಟಿ ಲೂಟಿ ಆಗಿದೆ, ಇದು ಯಾರ ಜೇಬಿಗೆ ಹೋಗಿದೆ ಎಂದು ಪ್ರಶ್ನಿಸಿದರು.