ಹೊಸದಿಗಂತ ವರದಿ, ಬೀದರ್:
ರಾಜ್ಯ ಸರ್ಕಾರ ಮಾಡಿಸಿದ ಜಾತಿ ಜನಗಣತಿ ವರದಿಯನ್ನು ವೀರಶೈವ ಲಿಂಗಾಯತ ಪಂಚಾಮಸಾಲಿ ಸಮಾಜ ಅದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಕುಡಲಸಂಗಮ ಧರ್ಮಕ್ಷೇತ್ರ ಪಂಚಮಸಾಲಿ ಪೀಠದ ಪೂಜ್ಯ ಬಸವಜಯ ಮೃತ್ಯುಂಜಯ ಸ್ವಾಮೀಜಿ ನುಡಿದರು.
ಭಾನುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಎಲ್ಲೋ ಕುಳಿತು ಮಾಡಿರುವ ಜಾತಿ ಜನಗಣತಿ ವರದಿ ಒಪ್ಪಲು ಸಾಧ್ಯವಿಲ್ಲ. ಈಗಾಗಲೇ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಶಾಮನೂರು ಶಿವಂಶಕರೆಪ್ಪ ಅವರು ಜಾತಿ ಜನಗಣತಿ ವರದಿ ವಿರೋಧಿಸಿದ್ದಾರೆ. ರಾಜ್ಯದಲ್ಲಿ 1 ಕೋಟಿ 30 ಲಕ್ಷ ಜನಸಂಖ್ಯೆ ಹೊಂದಿರುವ ಲಿಂಗಾಯತ ಒಳಪಂಗಡಗಳಲ್ಲಿ 94 ಪಂಗಡಗಳನ್ನು ಬಿಟ್ಟು ಬರಿ 19 ಪಂಗಡಗಳನ್ನು ಮಾತ್ರ ವರದಿಯಲ್ಲಿ ಸೇರಿಸಲಾಗಿದೆ. ಬಹುಸಂಖ್ಯಾತ ಲಿಂಗಾಯತರು ಇರುವ ಕರ್ನಾಟಕದಲ್ಲಿ ಅವೈಜ್ಞಾನಿಕ ಜಾತಿ ಜನಗಣತಿ ವರದಿ ಒಪ್ಪಲು ಹೇಗೆ ಸಾಧ್ಯ ಎಂದು ಸ್ವಾಮಿಜಿ ಪ್ರಶ್ನೆ ಮಾಡಿದರು.
ಕರ್ನಾಟಕದ ಹಲವು ಭಾಗಗಳಲ್ಲಿ ಲಿಂಗಾಯತ ಸಮುದಾಯವನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ನಮ್ಮ ಸಮುದಾಯಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಯಾವುದೇ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ನಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು ಹಾಗೂ ಕೇಂದ್ರ ಸರ್ಕಾರ ಎಲ್ಲ ಲಿಂಗಾಯತ ಒಳ ಪಂಗಡಗಳಿಗೂ ಒಬಿಸಿ 2ಎ ಪಟ್ಟಿಯಲ್ಲಿ ಸೇರಿಸಬೇಕು. ಕೂಡಲೇ ರಾಜ್ಯ ಸರ್ಕಾರ ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಈ ಎರಡು ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಕುಡಲಸಂಗಮದಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಹಮ್ಮಿಕೊಂಡು ವಿಧಾನ ಸೌಧದ ಮುಂದೆ 10 ಲಕ್ಷ ನಮ್ಮ ಸಮುದಾಯ ಜನ ಸೇರಿಸಿದಾಗ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೆಪ್ಟೆಂಬರ್ 15 ಒಳಗಡೆ ಮೀಸಲಾತಿ ಓಳ ಪಂಗಡಗಳ ಕುರಿತು ಗೆಜೆಟ್ ಹೊರಡಿಸುವುದಾಗಿ ಘೋಷಿಸಿದ್ದರು. ಆದರೆ ಅವರು ಜೂನ್‍ನಲ್ಲೆ ರಾಜೀನಾಮೆ ನೀಡಿದರು. ನಂತರ ಬೊಮ್ಮಾಯಿ ಸರ್ಕಾರ ಸರ್ವೇ ಮಾಡಿಸಲು ಆದೇಶ ಹೊರಡಿಸಿತು. ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ 20 ನಲಕ್ಷ ಜನ ನಮ್ಮ ಸಮುದಾಯದವರು ಸೇರಿ ದೆಹಲಿಯ ಫ್ರಿಡಮ್ ಪಾರ್ಕ್‍ನಲ್ಲಿ ಧರಣಿ ನಡೆಸಿದೆವು. ಧರಣಿ ಕೊನೆ ದಿನ ಹಾಲಿ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಅವರು 2ಡಿ ಮೀಸಲಾತಿ ನೀಡಿ ಅದರಲ್ಲಿ ಇತರೆ ಜನಾಂಗದವರನ್ನು ಸೇರಿಸುವುದಾಗಿ ಭರವಸೆ ನೀಡಿದರು. ಆದರೆ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ನಮ್ಮ 50 ಪ್ರತಿಶತ ಪಂಚಮಸಾಲಿ ಲಿಂಗಾಯತರು ಕಾಂಗ್ರೆಸ್‍ಗೆ ಮತ ಹಾಕಿದ್ದಕ್ಕಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಿದ್ಧರಾಮಯ್ಯನವರು ಸಹ ಮೀಸಲಾತಿ ಬಗ್ಗೆ ಭರವಸೆ ನೀಡಿದ್ದರು. ಆದರೆ ಇಲ್ಲಿಯ ವರೆಗೆ ಅದು 10 ತಿಂಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಾರಣಕ್ಕೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಾವು ಎಲ್ಲ ಜಿಲ್ಲೆಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಿ ಅಲ್ಲಿ ಲಿಂಗಪುಜೆ ಮಾಡಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಾಯಿತು. ಬೆಳಗಾವಿಯಿಂದ ಆರಂಭವಾದ ಹೋರಾಟ ಕಲಬುರಗಿ ಅವರೆಗೆ ಸಾಗಿ ಬಂದಿದೆ. ಕಲಬುರಗಿಯಲ್ಲಿ 12ನೇ ಸಮಾವೇಶ ಜರುಗುತ್ತಲಿದ್ದು, ಈ ಹಿಂದೆ ಬೆಳಗಾವಿ, ರಾಯಚೂರು, ಕೊಪ್ಪಳ, ಗದಗ, ದಾವಣಗೆರೆ, ಶಿವಮೊಗ್ಗೆ, ಯಾದಗಿರಿ ಸೇರಿದಂತೆ ಒಟ್ಟು 11 ಜಿಲ್ಲೆಗಳು ಮುಗಿಸಿ ಈ ತಿಂಗಳ 12ರಂದು ಕಲ್ಯಾಣ ಕರ್ನಾಟಕ ಪ್ರಥಮ ಲಿಂಗಾಯತ ದೀಕ್ಷ ಪಂಚಮಸಾಲಿ ಬೃಹತ್ ಸಮಾವೇಶವನ್ನು ಕಲಬುರಗಿಯ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಜರುಗಲಿದೆ. ನಮ್ಮ ಸಮಾಜದ ನಾಯಕರು ಹಾಗೂ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರ ನೇತೃತ್ವದಲ್ಲಿ ಸಮಾಜದ ಎಲ್ಲ ಸ್ವಾಮಿಜಿಗಳ ಸಮ್ಮುಖದಲ್ಲಿ ಈ ಸಮಾವೇಶ ಜರುಗಲಿದ್ದು, ಕಲ್ಯಾಣ ಕರ್ನಾಟಕ ಭಾಗದ ನಮ್ಮ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕೆಂದು ಸ್ವಾಮಿಜಿ ಕರೆ ಕೊಟ್ಟರು.
ಪತ್ರಿಕಾಗೋಷ್ಟಿಯಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷ ರಾಜಕುಮಾರ ತರಿ, ಗೌರವಾಧ್ಯಕ್ಷ ಶಿವರಾಜ ಕಲ್ಲೂರೆ, ಔರಾದ್ ಯುವ ಘಟಕದ ಅಧ್ಯಕ್ಷ ಅರುಣಕುಮಾರ ಗುದಗೆ, ಬೀದರ್ ತಾಲೂಕಧ್ಯಕ್ಷ ವೀರಪ್ಪ ಅಡ್ಡೆ, ಪ್ರಮುಖರಾದ ರಾಜಕುಮಾರ ಮಡಕಿ, ಸಂದೀಪ ಉದಗಿರೆ, ಸದಾನಂದ ಹಳ್ಳೆ, ಮಲ್ಲಿಕಾರ್ಜುನ್ ಚಿಕಪೆಟೆ ಸೇರಿದಂತೆ ಇತರರಿದ್ದರು.