ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತಿ ಘರ್ಷಣೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದು, ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃಷ್ಣಗಿರಿ ಜಿಲ್ಲೆಯ ಕೊಟ್ಟಾಯೂರು ಗ್ರಾಮದಲ್ಲಿ ಗಲಭೆ ನಡೆದಿದ್ದು, ಒಂಬತ್ತು ದಲಿತರು ಗಾಯಗೊಂಡಿದ್ದಾರೆ. ಎಂ. ಮೋಹನ್ ಎಂಬಾತನ ಬೈಕ್ ಆಕಸ್ಮಿಕವಾಗಿ ಎಸ್. ಮಾರಲಿಂಗಮ್ ಅವರಿಗೆ ಡಿಕ್ಕಿ ಹೊಡೆದಿದ್ದು, ಇದೇ ವಿಷಯಕ್ಕೆ ವಾಗ್ವಾದ ಏರ್ಪಟ್ಟಿದೆ.
ಮೇಲ್ಜಾತಿ, ಕೆಳಜಾತಿ ವಿಷಯಗಳು ಮಾತಿಗೆ ಮಧ್ಯೆ ಬಂದಿದ್ದು, ಮೇಲ್ಜಾತಿಯ ಮೋಹನ್ ಮನೆಗೆ ಬಂದು ತನ್ನ ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ಅವರು ಮಾರಲಿಂಗಮ್ ಮೇಲೆ ಹಲ್ಲೆ ಮಾಡಿದ್ದಾರೆ.
ನಂತರ ಮಾರಲಿಂಗಮ್ ತನ್ನ ಸ್ನೇಹಿತರಿಗೆ ಮಾಹಿತಿ ನೀಡಿದ್ದು, 100ಕ್ಕೂ ಹೆಚ್ಚು ಮಂದಿ ಮೋಹನ್ ಮನೆಗೆ ತೆರಳಿದ್ದಾರೆ. ಆಗ ಮೋಹನ್ ಬೀದಿ ದೀಪಗಳನ್ನು ಆರಿಸಿ ಚಾಕು ಹಾಗೂ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಮೋಹನ್ ಜತೆ ಸಾಕಷ್ಟು ಜನರಿದ್ದು, ಯಾರು ಹಲ್ಲೆ ಮಾಡಿದರು ಎನ್ನುವುದು ಗೊತ್ತಾಗದಂತೆ ಕತ್ತಲಲ್ಲಿ ಚಾಕು ಇರಿದಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಎರಡೂ ಕಡೆಯವರಿಗೆ ಸಮಾಧಾನ ಹೇಳಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕುಡಿದ ಮತ್ತಿನಲ್ಲಿ ಇಷ್ಟೆಲ್ಲಾ ಆಗಿದೆ, ಮೇಲ್ಜಾತಿಯ ಒಂಬತ್ತು ಹಾಗೂ ಆರು ದಲಿತರ ವಿರುದ್ಧ ದೂರು ದಾಖಲಾಗಿದೆ. ಶಾಂತಿ ಕಾಪಾಡಲು ಇನ್ನೂ ಪೊಲೀಸರು ಗ್ರಾಮಗಳಲ್ಲೇ ಬೀಡು ಬಿಟ್ಟಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.