ಜಾನುವಾರು ಸಂರಕ್ಷಣೆಯೇ ಮೊದಲ ಆದ್ಯತೆ: ಸಚಿವ ಪ್ರಭು ಚವ್ಹಾಣ್

ಹೊಸದಿಗಂತ ವರದಿ,ಬೀದರ್:

ಜಾನುವಾರುಗಳ ರಕ್ಷಣೆಯೇ ನನ್ನ ಮೊದಲ ಆದ್ಯತೆಯಾಗಿದ್ದು, ಅದರಂತೆ ಇಲಾಖೆಯಿಂದ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿ ಅನುಕೂಲ ಮಾಡಿಕೊಡಲಾಗುತ್ತಿದೆ ಎಂದು ಪಶು ಸಂಗೋಪನೆ ಸಚಿವರಾದ ಪ್ರಭು.ಬಿ ಚವ್ಹಾಣ್ ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಅನುದಾನದಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಡಿ ಕಲ್ಯಾಣ ಕರ್ನಾಟಕ ಭಾಗದ 68 ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಜನವರಿ 31ರಂದು ಲೋಕಾರ್ಪಣೆಗೊಳಿಸಿ ಸಚಿವರು ಮಾತನಾಡಿದರು.

ಮೂಕ ಪ್ರಾಣಿಗಳಿಗೂ ನೆರವಾಗಬೇಕೆನ್ನುವ ದಿಶೆಯಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಮತ್ತು ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನು ಸಲ್ಲಿಸಿದ ಎಲ್ಲ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಜಾನುವಾರುಗಳ ಹಿತದೃಷ್ಟಿಯಿಂದ ಉತ್ತಮ ಯೋಜನೆಗಳು ಜಾರಿಗೊಳಿಸಲು ನೆರವಾಗಿದ್ದಾರೆ. ಸಾರ್ವಜನಿಕರು ಅನಾರೋಗ್ಯ ಸಮಸ್ಯೆ ಎದುರಿಸುವಾಗ 108 ಆಂಬ್ಯುಲೆನ್ಸ್ ನೆರವಿಗೆ ಬರುವಂತೆ ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಮೊದಲ ಹಂತದಲ್ಲಿ ರಾಜ್ಯದಲ್ಲಿ 15 ಆಂಬ್ಯುಲೆನ್ಸ್ಗಳನ್ನು ಲೋಕಾರ್ಪಣೆ ಮಾಡಿ ಸೇವೆ ಆರಂಭಿಸಲಾಗಿತ್ತು. ಈ ಸೇವೆಯನ್ನು ಗಮನಿಸಿದ ಕೇಂದ್ರ ಸರ್ಕಾರ ಈ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ ಈ ಯೋಜನೆಯನ್ನು ಇಡೀ ರಾಷ್ಟçದಲ್ಲಿ ಜಾರಿಗೊಳಿಸಲು ಮುಂದಾಗಿರುವುದಕ್ಕೆ ಹೆಮ್ಮೆಯಿದೆ. ಹಾಗೆಯೇ ಈ ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಕೇಂದ್ರ ಸರ್ಕಾರ ರಾಜ್ಯಕ್ಕೆ 275 ಪಶು ಆಂಬ್ಯುಲೆನ್ಸ್ಗಳನ್ನು ನೀಡಿದೆ. ಕೇಂದ್ರದ ಶೇ.60 ಹಾಗೂ ರಾಜ್ಯದ ಶೇ.40ರಷ್ಟು ಅನುದಾನದಲ್ಲಿ ಇವುಗಳ ನಿರ್ವಹಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.

ಗೋಮಾತೆಯ ಮೇಲಿನ ಕಾಳಜಿಯಿಂದಾಗಿ ಪಶು ಸಂಗೋಪನೆ ಖಾತೆಯನ್ನು ಸ್ವ-ಇಚ್ಛೆಯಿಂದ ಪಡೆದಿದ್ದೇನೆ. ಅದರಂತೆ ಕೆಲಸವೂ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿಯೂ ಅವಕಾಶ ಸಿಕ್ಕರೆ ಇದೇ ಖಾತೆಯನ್ನು ಪಡೆಯುತ್ತೇನೆ ಎಂದರು. ಜಾನುವಾರುಗಳ ಹಿತರಕ್ಷಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪ್ರಾಣಿ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭ, ಐತಿಹಾಸಿಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಪಶು ಸಂಜೀವಿನಿ ಆಂಬ್ಯುಲೆನ್ಸ್ಗಳ ಬಿಡುಗಡೆ ಸೇರಿದಂತೆ ಅನೇಕ ಉತ್ತಮ ಕೆಲಸಗಳಾಗಿವೆ. ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗಿದೆ. ಸಿಬ್ಬಂದಿಯ ಮುಂಬಡ್ತಿ ಸಮಸ್ಯೆ ನಿವಾರಿಸಲಾಗಿದೆ ಎಂದರು.

ಈಗಾಗಲೇ ಬೆಂಗಳೂರು ಮತ್ತು ಬೆಳವಾಗಿ ವಿಭಾಗದಲ್ಲಿ ಆಂಬ್ಯುಲೆನ್ಸ್ಗಳಿಗೆ ಚಾಲನೆ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೂ ಆಂಬ್ಯುಲೆನ್ಸ್ಗಳಿಗೆ ಲೋಕಾರ್ಪಣೆ ಮಾಡಿರುವುದಕ್ಕೆ ಹೆಚ್ಚಿನ ಸಂತೋಷ ನೀಡಿದೆ. ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸುತ್ತಿವ ಜಾನುವಾರುಗಳ ಮಾಲೀಕರು ಸಹಾಯವಾಣಿ 1962ಗೆ ಕರೆ ಮಾಡಿದಲ್ಲಿ ರೈತರ ಮನೆ ಬಾಗಿಲಿನ ವರೆಗೆ ಆಂಬ್ಯುಲೆನ್ಸ್ ಬಂದು ಸೇವೆ ನೀಡಲಿದೆ. ಬಳಿಕ ವೈದ್ಯಾಧಿಕಾರಿಗಳಿಂದ ಚಿಕಿತ್ಸೆ ನೀಡಿರುವ ಬಗ್ಗೆ ಖಚಿತತೆ ಪಡೆಯುವ ವ್ಯವಸ್ಥೆಯಿದೆ. ರೈತರು ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದು ರೈತರದಲ್ಲಿ ಮನವಿ ಮಾಡಿದರು. ಹಾಗೆಯೇ ಪಶುವೈದ್ಯಾಧಿಕಾರಿಗಳೂ ಕೂಡ ಸರಿಯಾಗಿ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.

ಗೋವುಗಳು ಅಕ್ರಮವಾಗಿ ಕಸಾಯಿಖಾನೆಗೆ ಹೋಗುವುದಕ್ಕೆ ಕಡಿವಾಣ ಹಾಕಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯ ನಂತರ 30 ಸಾವಿರ ಹಸುಗಳನ್ನು ರಕ್ಷಿಸಿದ್ದು, ಸುಮಾರು ಎರಡು ಸಾವಿರ ಪ್ರಕರಣಗಳನ್ನು ದಾಖಲಿಸಲಾಗಿದೆ. ರಾಜ್ಯದಲ್ಲಿ ಹೊಸ ಗೋಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗಳಲ್ಲಿ ಗೋಮಾಳಕ್ಕೆ ಜಮೀನು ಕಾಯ್ದಿರಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ ಹಾಗೂ ಶಾಸಕರಾದ ರಹೀಮ ಖಾನ್ ಅವರು ಮಾತನಾಡಿ, ಪಸು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!