ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಹಲವು ಸಮಯದಿಂದ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ (Kuno National Park )3 ದಿನಗಳ ಅಂತರದಲ್ಲಿ 2 ಚೀತಾಗಳು (Cheetah) ಸಾವನ್ನಪ್ಪಿದ್ದವು. ಇದಕ್ಕೆ ಕಾರಣ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ಗಳಿಂದ (Radio Collar) ಉಂಟಾಗಿದ್ದ ಸೋಂಕೇ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಕಳೆದ ಮಂಗಳವಾರ ತೇಜಸ್ ಹಾಗೂ ಶುಕ್ರವಾರ ಸೂರಜ್ ಎಂಬ ಚೀತಾಗಳು ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಶವವಾಗಿ ಪತ್ತೆಯಾಗಿತ್ತು.
ತೇಜಸ್ ಕೆಲ ದಿನಗಳ ಹಿಂದೆ ಹೆಣ್ಣು ಚೀತಾಗಳೊಂದಿಗೆ ಕಾದಾಡಿ ಗಾಯಗೊಂಡಿತ್ತು. ಬಳಿಕ ಅದು ಚೇತರಿಸಿಕೊಳ್ಳಲು ಸಾಧ್ಯವಾಗದೇ ಸಾವನ್ನಪ್ಪಿತ್ತು ಎಂದು ಹೇಳಲಾಗಿತ್ತು. ಆದರೆ ಬಳಿಕ ಅದರ ಕತ್ತಿನ ಸುತ್ತ ಆಗಿದ್ದ ಸೋಂಕು ಕೂಡಾ ಅದರ ಸಾವಿಗೆ ಕಾರಣ ಎಂಬುದು ತಿಳಿದುಬಂದಿದೆ.
ತೇಜಸ್ ಹಾಗೂ ಸೂರಜ್ ಎರಡೂ ಚೀತಾಗಳ ಕತ್ತಿನ ಸುತ್ತಲೂ ರೇಡಿಯೋ ಕಾಲರ್ಗಳಿಂದಾಗಿ ಸೋಕು ಉಂಟಾಗಿದ್ದು, ಅದರ ಗಾಯಗಳಿಂದಾಗಿ ಅವು ಸಾವನ್ನಪ್ಪಿದೆ ಎಂದು ತಜ್ಞರು ತಿಳಿಸಿದ್ದಾರೆ.
ಇದೀಗ ರೇಡಿಯೋ ಕಾಲರ್ ಅಳವಡಿಸಲಾಗಿರುವ ಎಲ್ಲಾ ಚೀತಾಗಳನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಈ ಘಟನೆಗಳು ದುರದೃಷ್ಟಕರವಾಗಿದ್ದರೂ ಪ್ರಾಜೆಕ್ಟ್ ಚೀತಾಗೆ ಹಿನ್ನಡೆಯಲ್ಲ ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಚೀತಾದ ಸಂತತಿಯ ಪುನರುತ್ಥಾನದ ಯೋಜೆನೆಯ ಅನುಷ್ಠಾನದಲ್ಲಿ ನೈಸರ್ಗಿಕ ಸಾವು ಸಹಜ. ಇದು ಸರಾಸರಿ ಸಾವಿನ ಪ್ರಮಾಣವನ್ನು ದಾಟಿಲ್ಲ. ಭಾರತಕ್ಕೆ ತರಲಾಗಿರುವ ಚೀತಾಗಳ ಪೈಕಿ 75% ರಷ್ಟು ಜೀವಂತವಾಗಿದ್ದು, ಆರೋಗ್ಯವೂ ಆಗಿವೆ ಎಂದಿದ್ದಾರೆ