ಕಾವೇರಿ ವಿಚಾರ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ: ಬೊಮ್ಮಾಯಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದ್ದು, ಈಗ ಕಾನೂನು ತಜ್ಞರು, ರೈತರನ್ನು ಕರೆದು ಮಾತನಾಡಿಸುತ್ತಿದೆ. ಈ ಕೆಲಸ ಮೊದಲೇ ಮಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಸಿಎಂ, ಡಿಸಿಎಂ ನಡುವೆ ಹೊಂದಾಣಿಕೆಯಿಲ್ಲ, ಆದರೆ, ಗೃಹ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ನಡುವೆಯೂ ಹೊಂದಾಣಿಕೆ ಇಲ್ಲ ಎನ್ನುವುದು ಸಾಬೀತಾಗಿದೆ ಎಂದರು.

ಕೊಳ್ಳೆ ಹೊಡೆದ ಮೇಲೆ ಬಾಗಿಲು ಹಾಕಿದಂತೆ ಈಗ ಕಾನೂನು ಹೋರಾಟ ಮಾಡಲು ಹೊರಟಿದ್ದಾರೆ. ಕಾನೂನು ತಜ್ಞರ ಜೊತೆ ಮಾತನಾಡುವ ಕೆಲಸವನ್ನು ಮುಂಚೆಯೇ ಮಾಡಬೇಕಿತ್ತು. ಈಗಲಾದರೂ ಸರ್ಕಾರ ಪ್ರಾಮಾಣಿಕವಾಗಿ ಕಾನೂನು ಹೋರಾಟ ಮಾಡಿ, ಮುಂದಿನ ದಿನಗಳಲ್ಲಿ ರಾಜ್ಯದ ವಿರುದ್ಧ ಆದೇಶಗಳು ಬರದಂತೆ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು. ಈ ಸರ್ಕಾರಕ್ಕೆ ಕೆಟ್ಟ ಮೇಲೆ ಬುದ್ಧಿ ಬರುತ್ತಿದೆ. ಕಾನೂನು ತಜ್ಞರು ರೈತರನ್ನು ಮುಂಚೆಯೇ ಮಾತನಾಡಬೇಕಿತ್ತು. ಗಡಿ, ನೆಲ ಜಲ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್​​ ಪರಿಣಿತರಿದ್ದಾರೆ‌ ಅವರನ್ನು‌ ಕರೆದು ಮಾತನಾಡಿಸಬೇಕಿತ್ತು. ಇನ್ನೂ ಅನೇಕ ಕಾನೂನು ತಜ್ಞರಿದ್ದಾರೆ. ಅವರೊಡನೆ ಮಾತನಾಡಬೇಕಿತ್ತು ಎಂದು ಹೇಳಿದರು.

ಬರ ಪರಿಹಾರ ನೀಡಲಿ
ರಾಜ್ಯದಲ್ಲಿ ಬರಗಾಲ ಇದ್ದಾಗ ಇಂತಹ ಸರ್ಕಾರ ಇರೋದು ದುರಂತ‌. ಉತ್ತರ ಕರ್ನಾಟಕದ ನೂರಾರು ತಾಲೂಕುಗಳಲ್ಲಿ ಬರ ಇದೆ. ಇದಕ್ಕೂ ಇವರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ. ಪ್ರವಾಹ ಬಂದಾಗ ನಾವೇ ಪರಿಹಾರ ಕೊಟ್ಟಿದ್ದೇವೆ. ಕೇಂದ್ರದ ಪರಿಹಾರಕ್ಕಿಂತ ಎರಡು ಪಟ್ಟು ಹಣ ಕೊಟ್ಟಿದ್ದೇವೆ. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ಯಾವ ರೀತಿ ವರ್ತಿಸುತ್ತಿದೆ ಅನ್ನುವುದರ ಮೇಲೆ ಸರ್ಕಾರದ ನಡೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.

ಇನ್ನು ಕೋಲಾರದಲ್ಲಿ ಈದ್​ ಮಿಲಾದ್ ಸಂದರ್ಭದಲ್ಲಿ ಖಡ್ಗ ಹಿಡಿದು ಮೆರವಣಿಗೆ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಆಡಳಿತ ಹೇಗಿರುತ್ತದೆಯೋ ಹಾಗೆ ಇಂಥವರ ಆಟಗಳು ನಡೆಯುತ್ತವೆ. ಈಗ ಗೂಂಡಾಗಳಿಗೆ, ಗಲಾಟೆ ಮಾಡುವವರಿಗೆ ಯಾವುದೇ ಭಯ ಇಲ್ಲ. ಹೀಗಾಗಿ ಮುಕ್ತವಾಗಿ ಈ ರೀತಿ ತಿರುಗಾಡುವಂತಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!