ಹೊಸದಿಗಂತ ವರದಿ ಮಂಡ್ಯ:
ತಮಿಳುನಾಡಿಗೆ ನೀರು ಬಿಡುತ್ತಿರುವ ಸರ್ಕಾರದ ವಿರುದ್ಧ ಮಹಾಲಯ ಅಮಾವಾಸ್ಯೆ ದಿನದಂದು ಹೋರಾಟ ಮುಂದುವರೆದಿದ್ದು, ಕಾವೇರಿ ಹೋರಾಟಗಾರರು ಪಿತೃಪಕ್ಷ ಹಬ್ಬದ ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ ತಿನ್ನುವ ಮೂಲಕ ಮಂಡ್ಯದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಮಹಾಲಯ ಅಮಾವಾಸ್ಯೆ ಪಿತೃ ಪಕ್ಷ ಎಂದೇ ಪ್ರಸಿದ್ಧಿ, ಪೂರ್ವಜರ ಸ್ಮರಿಸಿ ಅವರಿಗೆ ಇಷ್ಟವಾದ ಆಹಾರ ಪದಾರ್ಥ ಇರಿಸಿ ಪೂಜೆ ಸಲ್ಲಿಸುವುದು ನಡೆದು ಬಂದ ಸಂಪ್ರದಾಯ. ಇಂತಹ ದಿನದಲ್ಲೂ ಕಾವೇರಿ ಹೋರಾಟ ನಡೆದಿದೆ.
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಜೊತೆಗೂಡಿದ ಕನ್ನಡ ಸೇನೆ ಕಾರ್ಯಕರ್ತರು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಬ್ಬದ ತಿಂಡಿ ತಿನಿಸುಗಳನ್ನು ಸೇವಿಸುವ ಮೂಲಕ ಹೋರಾಟ ಮುಂದುವರಿಸಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ನಿರಂತರ ಧರಣಿಗೆ ಮಳವಳ್ಳಿ ಮತ್ತು ಕೆ.ಎಂ.ದೊಡ್ಡಿ ಭಾಗದ ರೈತ ಸಂಘದ ಕಾರ್ಯಕರ್ತರು ಬೆಂಬಲ ಸೂಚಿಸಿ ಭಾಗಿಯಾದರು. ಕೇಂದ್ರ- ರಾಜ್ಯ ಸರ್ಕಾರ ಮತ್ತು ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ಧ ದಿಕ್ಕಾರದ ಘೋಷಣೆ ಕೂಗಿ ಜಲಾಶಯಗಳನ್ನು ಬರಿದು ಮಾಡುವ ಮೂಲಕ ರೈತರು ಮತ್ತು ಕನ್ನಡಿಗರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದು ಕಿಡಿ ಕಾರಿದರು.
ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶ ತಿರಸ್ಕರಿಸಿ ಕಾವೇರಿ ಕೊಳ್ಳದ ಜಲಾಶಯಗಳಿಂದ ಹರಿಯುತ್ತಿರುವ ನೀರು ಸ್ಥಗಿತ ಮಾಡಬೇಕು, ಕರ್ನಾಟಕ ಸರ್ಕಾರ ರೈತರ ಜೊತೆ ಕಣ್ಣ ಮುಚ್ಚಾಲೆ ಆಟ ಆಡುತ್ತಿದೆ, ರೈತರ ಹಿತ ಕಾಪಾಡುವುದಾಗಿ ಜಲಸಂಪನ್ಮೂಲ ಸಚಿವರು ಹೇಳುತ್ತಾರೆ. ಆದರೆ ನೆರೆ ರಾಜ್ಯಕ್ಕೆ ನೀರು ಮಾತ್ರ ಹರಿಸುತ್ತಲೇ ಇದೆ ಎಂದು ಹೇಳಿದರು.
ಚುನಾಯಿತ ಜನಪ್ರತಿನಿಧಿಗಳು ರಾಜ್ಯದ ರೈತರ ಹಿತ ಕಾಪಾಡಲು ಮುಂದಾಗಬೇಕು, ಕುಡಿಯುವ ನೀರು ಉಳಿಸಿಕೊಳ್ಳಬೇಕು, ಪ್ರಧಾನ ಮಂತ್ರಿ, ರಾಷ್ಟ್ರಪತಿ ಬಳಿಗೆ ತೆರಳಿ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಮುಂದಾಗಬೇಕೆಂದು ಒತ್ತಾಯಿಸಿದರು.