ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಮನಕಂಡತ್ತಿಲ್ ತೆಕ್ಕೆತಿ ಅಲಿಯಾಸ್ ಶೀಲಾ ಅಲ್ಲ್ಯಾನಿಯನ್ನು ಇಂಟರ್‌ಪೋಲ್ ಸಹಕಾರದೊಂದಿಗೆ ಮರಳಿ ಕರೆತರುವಲ್ಲಿ ಕೇಂದ್ರ ತನಿಖಾ ದಳ (CBI) ಯಶಸ್ವಿಯಾಗಿದೆ .
ಭಾರತ ವಿದೇಶಾಂಗ ಸಚಿವಾಲಯ (MEA) ಮತ್ತು ಗೃಹ ಸಚಿವಾಲಯ (MHA)ದ ಸಹಯೋಗದೊಂದಿಗೆ ಸಿಬಿಐ, ಸೌದಿ ಅರೆಬಿಯಾಗೆ ಪರಾರಿಯಾಗಿದ್ದ ಮನಕಂಡತ್ತಿಲ್ ತೆಕ್ಕೆತಿಯನ್ನು 9 ಅಕ್ಟೋಬರ್ 2025ರಂದು ಭಾರತಕ್ಕೆ ಮರಳಿ ಕರೆತಂದಿದೆ ಎಂದು ಸಂಸ್ಥೆಯು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮನಕಂಡತ್ತಿಲ್ ತೆಕ್ಕೆತಿ ಅಲಿಯಾಸ್ ಶೀಲಾ ಅಲ್ಲ್ಯಾನಿ ವಿರುದ್ಧ 5 ಅಕ್ಟೋಬರ್ 2023 ರಂದು ಇಂಟರ್‌ಪೋಲ್ ಮೂಲಕ ಕೇಂದ್ರ ತನಿಖಾ ದಳ ರೆಡ್ ನೋಟಿಸ್ ಜಾರಿ ಮಾಡಿತ್ತು. ಬಳಿಕ, ಸಿಬಿಐ ಅಧಿಕಾರಿಗಳ ತಂಡವೊಂದು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಆರೋಪಿಯನ್ನು ಭಾರತಕ್ಕೆ ಕರೆತಂದಿದ್ದಾರೆ.
ಕಳೆದ ಕೆಲ ವರ್ಷಗಳಲ್ಲಿ ಪರಾರಿಯಾಗಿದ್ದ 130ಕ್ಕೂ ಹೆಚ್ಚು ವಾಂಟೆಡ್ ಅಪರಾಧಿಗಳನ್ನು ಇಂಟರ್‌ಪೋಲ್ ಸಹಕಾರದೊಂದಿಗೆ ಭಾರತಕ್ಕೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಿಬಿಐ ತಿಳಿಸಿದೆ.