ಕೇಂದ್ರ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಸಿಬಿಐಗೆ ರಾಜ್ಯ ಸರ್ಕಾರಗಳ ಅನುಮತಿ ಬೇಡ: ಸುಪ್ರೀಂ ಕೋರ್ಟ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿವಿಧ ರಾಜ್ಯಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಸಿಬಿಐಗೆ ರಾಜ್ಯ ಸರ್ಕಾರಗಳ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಭ್ರಷ್ಟಾಚಾರದ ಆರೋಪ ಸಂಬಂಧ ಆಂಧ್ರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆಯನ್ನು ಆಂಧ್ರಪ್ರದೇಶ ಹೈಕೋರ್ಟ್ ರದ್ದುಗೊಳಿಸಿತ್ತು. ಆದರೆ ಹೈಕೋರ್ಟ್ ಆದೇಶವನ್ನೇ ಈಗ ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ನ್ಯಾಯಮೂರ್ತಿ ಸಿಟಿ ರವಿಕುಮಾರ್ ಮತ್ತು ರಾಜೇಶ್ ಬಿಂದಲ್ ಅವರಿದ್ದ ನ್ಯಾಯಪೀಠ, ಕೇಂದ್ರ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಗಂಭೀರ ಆರೋಪವನ್ನು ಎದುರಿಸುತ್ತಿರುವಾಗ ಅವರು ಯಾವ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮುಖ್ಯವಾಗುವುದಿಲ್ಲ ಎಂದು ಹೇಳಿದೆ.

ಏನಿದು ಪ್ರಕರಣ?
ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ್ದರಿಂದ ಚರ್ಚೆ ಮುನ್ನೆಲೆಗೆ ಬಂದಿತ್ತು. ಆಂಧ್ರ ಪ್ರದೇಶ ವ್ಯಾಪ್ತಿಯಲ್ಲಿ ರಾಜ್ಯ ಸರ್ಕಾರದ ಅನುಮತಿ ಪಡೆಯದೆ ಸಿಬಿಐ ಎಫ್​ಐಆರ್ ದಾಖಲಿಸುವ ಅಧಿಕಾರ ಪ್ರಶ್ನಿಸಿ ನೌಕರರು ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದರು. 1946ರ ಡೆಲ್ಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ ಪ್ರಕಾರ, ಅವಿಭಜಿತ ಆಂಧ್ರಪ್ರದೇಶ ವ್ಯಾಪ್ತಿಯಲ್ಲಿದ್ದ ನೌಕರರ ಮೇಲೆ ಸಿಬಿಐ ರಾಜ್ಯದ ಅನುಮತಿ ಪಡೆಯದೇ ಪ್ರಕರಣ ದಾಖಲಿಸಿದ್ದು ಸರಿಯಲ್ಲ ಎಂದು ಹೈಕೋರ್ಟ್​​​ನಲ್ಲಿ ಆರೋಪಿಗಳು ವಾದ ಮಂಡಿಸಿದ್ದರು.

ಆಂಧ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರದ ನೌಕರರ ವಾದ ಪುರಸ್ಕರಿಸಿದ್ದ ಹೈಕೋರ್ಟ್ ಭ್ರಷ್ಟಾಚಾರ ತಡೆ ಕಾಯಿದೆಯಡಿ ದಾಖಲಿಸಿದ ಎಫ್ಐಆರ್ ಅನ್ನು ವಜಾ ಗೊಳಿಸಿತ್ತು. ಜೊತೆಗೆ ಸಿಬಿಐ ಪ್ರಕರಣದ ಕಲಿಸುವುದಕ್ಕೆ ಮುನ್ನ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು ಎಂದು ಉಲ್ಲೇಖಿಸಲಾಗಿತ್ತು.

ಆಂಧ್ರ ಪ್ರದೇಶ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್​​ನಲ್ಲಿ ಐತಿಹಾಸಿಕ ತೀರ್ಪು ಪ್ರಕಟವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here