ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಬಿಐಗೆ ಇತ್ತೀಚೆಗೆ ನೇಮಕಗೊಂಡಿದ್ದ ಯುವ ವಕೀಲರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ರಾಂಬನ್ ಜಿಲ್ಲೆಯ ಬನಿಹಾಲ್ ಸಮೀಪ ಈ ದುರ್ಘಟನೆ ನಡೆದಿದ್ದು, ಹಿಂದಿನಿಂದ ವೇಗವಾಗಿ ಬಂದ ಕಾರೊಂದು ವಕೀಲರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 35 ವರ್ಷದ ಶೇಖ್ ಆದಿಲ್ ನಬಿ ಅವರನ್ನು ತಕ್ಷಣ ಬನಿಹಾಲ್ ಉಪಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದನ್ನೂ ಓದಿ:
ಶೇಖ್ ಆದಿಲ್ ನಬಿ ಇತ್ತೀಚೆಗೆ ಕೇಂದ್ರ ತನಿಖಾ ದಳದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು. ಸುಮಾರು ಎರಡು ತಿಂಗಳ ಹಿಂದಷ್ಟೇ ಚಂಡೀಗಢದಲ್ಲಿರುವ ಸಿಬಿಐ ಕಚೇರಿಯಲ್ಲಿ ಸೇವೆ ಆರಂಭಿಸಿದ್ದ ಅವರು, ಕಾನೂನು ವಲಯದಲ್ಲಿ ಭರವಸೆಯ ಯುವ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ಡಿಕ್ಕಿ ಹೊಡೆದ ಮಹೀಂದ್ರಾ ಸ್ಕಾರ್ಪಿಯೋ ಕಾರಿನ ಚಾಲಕ ಮೊಹಮ್ಮದ್ ಶಫಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

